Dr C P Ravikumar

ಇದು ಮಕ್ಕಳಲ್ಲಿ ಕಂಡು ಬರುವ ಅಹಿತಕರ ವರ್ತನೆ, ಅಥವಾ ಭಾವನಾತ್ಮಕ ಪ್ರಕೋಪವಾಗಿದ್ದು, ವಿಶೇಷವಾಗಿ ಅಂಬೆಗಾಲಿಡುವ ಮಕ್ಕಳಲ್ಲಿ (12-18 ತಿಂಗಳ ವಯಸ್ಸಿನ ನಡುವೆ) ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ, ಮಕ್ಕಳ ಯಾವುದೇ ಆಸೆ ಅಥವಾ ಬೇಡಿಕೆಗಳು ಪೂರ್ಣಗೊಳ್ಳದಿದ್ದಲ್ಲಿ, ಅಂತಹವರಲ್ಲಿ ಈ ರೀತಿಯ ಕೋಪ-ತಾಪಗಳು ಪ್ರತಿಕ್ರಿಯೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ.  ಮಕ್ಕಳು ತಮ್ಮ ಅಗತ್ಯಗಳನ್ನು ವ್ಯಕ್ತಪಡಿಸಲು ಅಥವಾ ತಾವು ನಿರಾಶೆಗೊಂಡಾಗ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲದಿರುವುದರಿಂದ ಕೋಪಗೊಳ್ಳುವ ಮೂಲಕ ಪ್ರತಿಕ್ರಿಯಿಸುತ್ತಾರೆ. ಮಕ್ಕಳು ತಮ್ಮ ಕೋಪವನ್ನು ಸಾಮಾನ್ಯವಾಗಿ ಕೂಗುವುದು, ಕಚ್ಚುವುದು, ಅಳುವುದು, ಒದೆಯುವುದು, ಹೊಡೆಯುವುದು, ತಳ್ಳುವುದು, ವಸ್ತುಗಳನ್ನು ಎಸೆಯುವುದು, ತಲೆ ಬಡಿದುಕೊಳ್ಳುವುದು ಮತ್ತು ಉಸಿರು ಬಿಗಿಹಿಡಿಯುವುದರ ಮೂಲಕ ವ್ಯಕ್ತಪಡಿಸುತ್ತಾರೆ. ಈ ರೀತಿಯ ವರ್ತನೆಯು ಮಕ್ಕಳಲ್ಲಿ ಅತ್ಯಂತ ಸಹಜವಾಗಿದ್ದು, ಬೆಳವಣಿಗೆಯ ಒಂದು ಭಾಗ.. ಮಕ್ಕಳು ತಾವು ಹೆಚ್ಚು ಸ್ವತಂತ್ರವಾಗಿ ವರ್ತಿಸಲು ಕಲಿಯುವಾಗ ಮತ್ತು ತಮ್ಮ ಸಾಮರ್ಥ್ಯ ಮೀರಿ ಪರಿಸರದ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದಾಗ ಈ ರೀತಿಯ ನಡವಳಿಕೆಗಳು ಸಾಮಾನ್ಯವಾಗಿ ಕಂಡು ಬರುತ್ತವೆ.

 ಈ ರೀತಿ ಕೋಪಗೊಳ್ಳುವ ವರ್ತನೆಯ ಯಾವ ವಯಸ್ಸಿನಲ್ಲಿ ಶುರುವಾಗುತ್ತದೆ?

ಇದು ಸಾಮಾನ್ಯವಾಗಿ ಮಕ್ಕಳಲ್ಲಿ 12-18 ತಿಂಗಳ ವಯಸ್ಸಿನಲ್ಲಿ ಆರಂಭವಾಗುತ್ತದೆ. ನಂತರ, ಸುಮಾರು 2-3 ವರ್ಷ ವಯಸ್ಸಿನಲ್ಲಿ ಇದು ಇನ್ನಷ್ಟು ಹೆಚ್ಚಾಗುತ್ತದೆ. ಏಕೆಂದರೆ, ಈ ವಯಸ್ಸಿನಲ್ಲಿ ಮಕ್ಕಳಿಗೆ ಆಗಷ್ಟೇ ಭಾಷಾ ಕೌಶಲ್ಯಗಳು ಬೆಳವಣಿಗೆ ಹೊಂದಲು ಪ್ರಾರಂಭಿಸಿರುತ್ತದೆ ಹಾಗೂ ಅವರು ತಮ್ಮ ಬೇಕು-ಬೇಡಗಳು, ಇತರೆ ಅಗತ್ಯಗಳು, ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಆಗ ತಾನೇ ಕಲಿಯುತ್ತಿರುತ್ತಾರೆ. ಹಾಗಾಗಿ, ಈ ರೀತಿಯ ವರ್ತನೆಗಳು ಕಾಣಿಸಿಕೊಳ್ಳಬಹುದು. ಆದರೆ, ವಯಸ್ಸಾದಂತೆ ಅಂದರೆ, ಸುಮಾರು 4-5 ವರ್ಷಗಳಾದಾಗ, ಹಾಗೂ ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರು ತಮ್ಮ ನಕಾರಾತ್ಮಕತೆ ಭಾವನೆಗಳನ್ನು ನಿಯಂತ್ರಿಸಲು ಕಲಿಯುತ್ತಾರೆ.

ಈ ರೀತಿಯ ವರ್ತನೆಯು ಗಂಡು ಹಾಗೂ ಹೆಣ್ಣುಮಕ್ಕಳು ಇಬ್ಬರಲ್ಲಿಯೂ ಕಂಡು ಬರುತ್ತಾದರೂ, ಗಂಡುಮಕ್ಕಳಲ್ಲಿ ಈ ಪ್ರಮಾಣ ಸ್ವಲ್ಪ ಹೆಚ್ಚು. 

ಈ ಬಗೆಯ ಕೋಪೋದ್ರೇಕಗಳು ಸಾಮಾನ್ಯವಾಗಿ 2 ನಿಮಿಷಗಳಿಂದ ಪ್ರಾರಂಭಿಸಿ 20-25 ನಿಮಿಷಗಳವರೆಗೆ ಇರುತ್ತದೆ. ಆದರೆ, 25 ನಿಮಿಷಗಳಿಗಿಂತ ಹೆಚ್ಚು ಕಾಲ ಹಿಂಸಾತ್ಮಕ ಕೋಪಗಳು ಮುಂದುವರೆದಲ್ಲಿ, ಅದು ಹೆಚ್ಚು ಗಂಭೀರವಾದ ಸಮಸ್ಯೆಯ ಸೂಚನೆಯಾಗಿರಬಹುದು. ಸಾಮಾನ್ಯವಾಗಿ, ಇದು ದಿನದಲ್ಲಿ ಒಮ್ಮೆ ಕಾಣಿಸಿಕೊಳ್ಳುತ್ತದೆ.

 

ಕಾರಣಗಳೇನು?

 

  • ಮೂಲ ಕಾರಣ- ಇತರರ ಗಮನವನ್ನು ತಮ್ಮತ್ತ ಸೆಳೆಯಲು
  • ಹತಾಶೆ
  • ಏನನ್ನಾದರೂ ಕೊಡಿಸುವಂತೆ ಕೇಳುವುದು (ಉದಾಹರಣೆಗೆ ತಿಂಡಿ-ತಿನಿಸು ಅಥವಾ ಆಟಿಕೆ)
  • ಪೋಷಕರ ಮಾತನ್ನು ಕೇಳದಿರುವುದು/ ಅವರ ಸೂಚನೆಗಳನ್ನು ಅನುಸರಿಸದಿರುವುದು ಉದಾ: ಪಾರ್ಕ್ ನಿಂದ ಹೊರಡುವಂತೆ ಹೇಳಿದಾಗ, ತನ್ನ ಕೊಠಡಿ ಅಥವಾ ಇತರೆಯನ್ನು ಸ್ವಚ್ಛಗೊಳಿಸಲು ಹೇಳಿದಾಗ
  • ತನ್ನದೇ ಮಾತು ನಡೆಯಬೇಕೆಂಬ ಹಠವನ್ನು ಸಾಧಿಸಲು ವಿಫಲವಾದಾಗ
  • ಯಾವುದೇ ಕಷ್ಟದ ಕೆಲಸವನ್ನು ನಿರ್ವಹಿಸಲು ಅಸಮರ್ಥನಾದಾಗ/ಳಾದಾಗ
  • ಹಸಿವು
  • ಸುಸ್ತು
  • ಪೋಷಕರ ತಪ್ಪು ವರ್ತನೆಯಿಂದ ಹಾಗೂ
  • ಒಡಹುಟ್ಟಿದವರ ಪೈಪೋಟಿಯ ಕಾರಣದಿಂದಾಗಿಯೂ ಸಹ ಮಕ್ಕಳಲ್ಲಿ ಈ ರೀತಿಯ ವರ್ತನೆಗಳು ಕಾಣಿಸಿಕೊಳ್ಳಬಹುದು.

ಕೋಪೋದ್ವೇಗದ ಲಕ್ಷಣಗಳೇನು?

ಇವು ಮೌಖಿಕ/ ದೈಹಿಕ ಅಥವಾ ಎರಡೂ ರೂಪದಲ್ಲಿರಬಹುದು. ಇದರ ಮುಖ್ಯ ಲಕ್ಷಣಗಳೆಂದರೆ,

  • ಅಳುವುದು ಮತ್ತು ಕೂಗುವುದು
  • ಒದೆಯುವುದು, ಹೊಡೆಯುವುದು, ಕಚ್ಚುವುದು, ಮತ್ತು ಚುಚ್ಚುವುದು/ ಚಿವುಟುವುದು
  • ಕೈ ಮತ್ತು ಕಾಲುಗಳನ್ನು ಬಡಿಯುವುದು
  • ಇದ್ದಕ್ಕಿದ್ದಂತೆ ನೆಲದ ಮೇಲೆ ಮಲಗುವುದು
  • ತಲೆ ಬಡಿದುಕೊಳ್ಳುವುದು
  • ಕಾಲುಗಳನ್ನು ನೆಲದ ಮೇಲೆ ಜೋರಾಗಿ ಬಡಿಯುವುದು
  • ವಸ್ತುಗಳನ್ನು ಎಸೆಯುವುದು
  • ಮೂರ್ಛೆ ಹೋದಂತೆ ನಾಟಕವಾಡುವುದು
  • ಉಸಿರನ್ನು ಬಿಗಿ ಹಿಡಿದುಕೊಳ್ಳುವುದು ಹಾಗೂ 
  • ದೇಹವನ್ನು ಉದ್ವಿಗ್ನಗೊಳಿಸಿಕೊಳ್ಳುವುದು ಹಾಗೂ ದೇಹಕ್ಕೆ ಏನೋ ಪೆಟ್ಟಾದಂತೆ ಸುಮ್ಮಸುಮ್ಮನೆ ಕುಂಟುವುದು

ಈ ಸಮಸ್ಯೆಯನ್ನು ನಿರ್ವಹಿಸುವುದು ಹೇಗೆ?

 

  • ಮಗುವಿನ ಗಮನವನ್ನು ಬೇರೆಡೆ ಸೆಳೆಯಿರಿ:  ಕೋಪೋದ್ರೇಕವು ಆಗಷ್ಟೇ ಆರಂಭವಾಗಿ, ಪೂರ್ಣವಾಗಿ ಪ್ರಕೋಪದ ಹಂತ ತಲುಪುವ ಮೊದಲೇ, ಅಂದರೆ ಪ್ರಾರಂಭಿಕ ಹಂತದಲ್ಲೇ ಈ ಸಮಸ್ಯೆಯನ್ನು ಬಗೆಹರಿಸುವುದು ಸುಲಭ. ಅವರನ್ನು ಆಸಕ್ತಿಕರವಾದ ವಿಷಯಗಳಲ್ಲಿ ತೊಡಗಿಸಿಕೊಳ್ಳುವುದು ಅಥವಾ ಬೇರೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರ ಗಮನವನ್ನು ಬೇರೆಡೆ ಸೆಳೆದು ಅವರ ಕೋಪವನ್ನು ನಿರ್ವಹಿಸಬಹುದು.
  • ಶಾಂತವಾಗಿರಿ: ಮಗುವು ಕೋಪಗೊಂಡ ಸಮಯದಲ್ಲಿ, ಪೋಷಕರು ಶಾಂತವಾಗಿ ವರ್ತಿಸುವುದು ಹಾಗೂ ದೃಢ ಮತ್ತು ಸ್ಥಿರ ಮನಸ್ಥಿತಿಯಲ್ಲಿರುವುದು ಬಹಳ ಮುಖ್ಯ. ಅವರನ್ನು ಬೆದರಿಸಬೇಡಿ ಹಾಗೂ ಅವರೊಂದಿಗೆ ವಾದ ಮಾಡಬೇಡಿ.. ಹೀಗೆ ಮಾಡುವುದರಿಂದ ಅವರ ಕೋಪವು ಇನ್ನಷ್ಟು ಹೆಚ್ಚಾಗಬಹುದು. ಬದಲಾಗಿ, ಅವರ ಕೋಪ ಕಡಿಮೆಯಾದ ನಂತರ, ಅವರ ಮನಸ್ಸು ಶಾಂತವಾಗಿದ್ದಾಗ ಅವರ ಹಿಂದಿನ ನಡವಳಿಕೆಯ ಬಗ್ಗೆ ಮಾತನಾಡಿ.
  • ಅವರ ಕೋಪ-ತಾಪಗಳನ್ನು ಕಡೆಗಣಿಸಿ: ನಿಮ್ಮ ಕಣ್ಣಿನ ನೋಟವನ್ನು ಮಗುವಿನಿಂದ ಬೇರೆಡೆ ತಿರುಗಿಸುವ ಮೂಲಕ ಹಾಗೂ ಬೇರೆ ಬೇರೆ ಚಟುವಟಿಕೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು, ಮಗುವಿನೊಂದಿಗೆ ಮಾತನಾಡದೆ ಅವರ ವರ್ತನೆಯನ್ನು ನಿರ್ಲಕ್ಷಿಸಿ. ಇದರಿಂದ ತನ್ನ ಕೋಪದ ನಡವಳಿಕೆಯು ಯಾರೂ ಸಹ ಒಪ್ಪುವಂತಹುದಲ್ಲ ಎಂದು ಮಗುವಿಗೆ ಅರಿವಾಗುತ್ತದೆ.
  • ಮಗುವು ಕೋಪಗೊಂಡಾಗ ಅವರನ್ನು ಸೂಕ್ಷ್ಮವಾಗಿ ಗಮನಿಸಿ, ಸುರಕ್ಷಿತವಾಗಿರುವಂತೆ ನೋಡಿಕೊಳ್ಳಿ: ಮಗುವು ಕೋಪಗೊಂಡಾಗ ತನಗೆ ತಾನೇ ಅಥವಾ ಬೇರೆಯವರಿಗೆ ಅಪಾಯ ಮಾಡದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯವಾದುದು. ಅವರ ಬಳಿ ಯಾವುದೇ ಅಪಾಯಕಾರಿ ವಸ್ತುಗಳಿದ್ದಲ್ಲಿ, ಅದನ್ನು ತೆಗೆದಿಡಿ. ಮಗುವಿನ ಕೋಪವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲದ ಪಕ್ಷದಲ್ಲಿ, ಅವರು ಶಾಂತವಾಗುವವರೆಗೆ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿ. ಮಗುವನ್ನು ಕೆಲವು ನಿಮಿಷಗಳ ಕಾಲ ಸುರಕ್ಷಿತ ಮತ್ತು ಶಾಂತ ಸ್ಥಳದಲ್ಲಿ ಏಕಾಂಗಿಯಾಗಿರಲು ಸೂಚಿಸುವುದು ಅವರನ್ನು ಸಮಾಧಾನಪಡಿಸಲು ಉತ್ತಮ ವಿಧಾನ. ಇದನ್ನು ಇಂಗ್ಲೀಷ್ ನಲ್ಲಿ ’ಟೈಮ್ ಔಟ್” ಎನ್ನುತ್ತಾರೆ.
  • ಮಕ್ಕಳಿಗೆ ಹಿಂತಿರುಗಿ ಹೊಡೆಯುವುದು, ಕಚ್ಚುವುದು ಅಥವಾ ಒದೆಯುವುದು ಮಾಡದಿರಿ:  ಮಕ್ಕಳಿಗೆ ಹಿಂತಿರುಗಿಸಿ ಹೊಡೆಯುವುದು, ಒದೆಯುವುದರಿಂದ, ಈ ರೀತಿಯ ವರ್ತನೆಯು ಇತರರಿಗೆ ನೋವಾಗುತ್ತದೆ ಎಂಬ ವಿಷಯವನ್ನು ಅವರು ಕಲಿಯುತ್ತಾರೆ ಎಂದು ನೀವು ಭಾವಿಸಬಹುದು. ಆದರೆ, ವಸ್ತುಸ್ಥಿತಿ ಏನೆಂದರೆ, ಪೋಷಕರು ಮಕ್ಕಳೊಂದಿಗೆ ಈ ಮೇಲೆ ತಿಳಿಸಿದಂತೆ ವರ್ತಿಸಿದಲ್ಲಿ, “ತಾವು ಸಹ ಈ ರೀತಿ ಪ್ರತಿಕ್ರಿಯಿಸಬಹುದು, ಇದೊಂದು ಸ್ವೀಕಾರಾರ್ಹ ನಡವಳಿಕೆ” ಎಂದು ಮಗು ತಿಳಿದುಕೊಂಡು ಬಿಡುವ ಅಪಾಯವಿರುತ್ತದೆ. ಆದ್ದರಿಂದ, ಇತರರಿಗೆ ನೋವಾಗುವಂತೆ ವರ್ತಿಸುವುದು, ಪೆಟ್ಟು ಮಾಡುವುದು ಒಳ್ಳೆಯ ವರ್ತನೆಯಲ್ಲ, ಅವರೂ ಸಹ ಹಾಗೇ ಮಾಡಕೂಡದು ಎಂದು ಮನವರಿಕೆ ಮಾಡಿಕೊಡಬೇಕು.

ಮಗುವಿನ ಕೋಪವು ಕಡಿಮೆಯಾದ ನಂತರ ಏನು ಮಾಡಬೇಕು?

ಮಗುವು ಸಮಾಧಾನಗೊಂಡ ನಂತರ, ಸ್ವಲ್ಪ ಹೊತ್ತಿನ ಮುಂಚೆ ಮಗುವಿನ ನಡವಳಿಕೆ ಹೇಗಿತ್ತು ಎಂಬುದನ್ನು ಕುರಿತು ಮುಕ್ತವಾಗಿ ಮಾತನಾಡಿ ಹಾಗೂ ಮುಂದೆ ಆ ರೀತಿಯ ವರ್ತನೆಯನ್ನು ಹೇಗೆ ತಡೆಯಬಹುದು ಎಂದು ಚರ್ಚಿಸಿ.

ಮಗುವು ಶಾಂತಗೊಂಡಾಗ ಅದನ್ನು ಪ್ರಶಂಶಿಸಿ: ಮಗುವು ಸಮಾಧಾನಗೊಂಡ ನಂತರ, ಅವರು ಶಾಂತಗೊಂಡಿದ್ದನ್ನು ಗುರುತಿಸಿ ಪ್ರಶಂಶಿಸಿ.  ಮಗುವಿನ ಸಕಾರಾತ್ಮಕ ನಡವಳಿಕೆ ಮತ್ತು ಕೋಪ ಅಥವಾ ಶಾಂತ ಮನಸ್ಥಿತಿಯ ನಡುವೆ ಶಾಂತವಾಗಿರುವುದನ್ನು ಆರಿಸಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿ. ತಮ್ಮಲ್ಲಿನ ಉತ್ತಮ ನಡವಳಿಕೆಯನ್ನು ಗುರುತಿಸುವುದನ್ನು ಮಕ್ಕಳು ಇಷ್ಟಪಡುತ್ತಾರೆ. 

ಭಾವನೆಗಳನ್ನು ಗುರುತಿಸಲು ಮತ್ತು ದೃಢ/ ತೀವ್ರವಾದ ಭಾವನೆಗಳನ್ನು ನಿರ್ವಹಿಸಲು ನಿಮ್ಮ ಮಗುವಿಗೆ ಕಲಿಸಿ: ಮಕ್ಕಳಿಗೆ ತಮ್ಮ ಹತಾಶೆ, ಅಸೂಯೆ, ಕೋಪ ಅಥವಾ ನಿರಾಶೆಯನ್ನು ವ್ಯಕ್ತಪಡಿಸಲು ಅಥವಾ ವಿವರಿಸಲು ಬೇಕಾದ ಪದಗಳು ತಿಳಿದಿರುವುದಿಲ್ಲ. ಬದಲಾಗಿ, ಕೋಪಗೊಳ್ಳುವುದೊಂದೇ ಅವರಿಗೆ ತಿಳಿದಿರುವ ವಿಧಾನ. ಹಾಗಾಗಿ, ಕೋಪಗೊಳ್ಳುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಆದ್ದರಿಂದ, ಪೋಷಕರು ಮಕ್ಕಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಹಾಯವಾಗುವಂತಹ ಪದಗಳನ್ನು ಕಲಿಸಬೇಕು. ಸಮಸ್ಯೆಗಳನ್ನು ಎದೆಗುಂದದೆ ನಿಭಾಯಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳಸಬೇಕು. 

 

  • ಉತ್ತಮ ಮಾದರಿಯಾಗಿ: ಮಕ್ಕಳು ಬಹಳಷ್ಟು ವಿಷಯಗಳನ್ನು ತಮ್ಮ ಪೋಷಕರನ್ನು ನೋಡಿ ಕಲಿಯುವುದರಿಂದ ಅವರಿಗೆ ಉತ್ತಮ ಮಾದರಿ ರೂಪಿಸಿಕೊಡುವುದು ಬಹಳ ಮುಖ್ಯ. ಹಾಗಾಗಿ, ಪೋಷಕರು ಉತ್ತಮವಾಗಿ ವರ್ತಿಸಬೇಕಾಗುತ್ತದೆ.

ಮಕ್ಕಳಲ್ಲಿ ಕೋಪೋದ್ರೇಕಗಳನ್ನು ನಿಯಂತ್ರಿಸುವುದು ಹೇಗೆ?

ಕೋಪೋದ್ರೇಕಗಳು ಮಗುವಿನ ಪರಿಸರದ ನೈಸರ್ಗಿಕ ಭಾಗವಾಗಿರುವುದರಿಂದ ನಾವು ಸಂಪೂರ್ಣವಾಗಿ ಕೋಪ-ಮುಕ್ತ ವಾತಾವರಣವನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ. ಆದರೆ, ಮಗುವು ಮತ್ತೆ ಮತ್ತೆ ಕೋಪಗೊಳ್ಳುವುದನ್ನು ಮತ್ತು ಅದರ ತೀವ್ರತೆಯನ್ನು ಕಡಿಮೆ ಮಾಡಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು:

 

  • ಸೂಕ್ತ ಆಹಾರ ಮತ್ತು ಸರಿಯಾದ ನಿದ್ರೆ: ಕೆಲವೊಮ್ಮೆ, ಕಿರಿಕಿರಿಯು ಸಹ ಕೋಪಕ್ಕೆ ಕಾರಣವಾಗಬಹುದು. ಸರಿಯಾದ ಪೋಷಣೆಯಿಲ್ಲದಿದ್ದಾಗ ಮತ್ತು ನಿದ್ರೆಯ ಕೊರತೆಯಿಂದ ಮಗುವಿಗೆ ಕಿರಿಕಿರಿಯುಂಟಾಗಬಹುದು. ಹಾಗಾಗಿ, ಮಗುವಿಗೆ ಸಮತೋಲಿತ ಆಹಾರ ನೀಡಿ ಮತ್ತು ಸಾಕಷ್ಟು ನಿದ್ರೆ ಮಾಡಿಸಿ.

ಆಯ್ಕೆಗಳನ್ನು ನೀಡಿ: ಸಾಧ್ಯವಾದ ಸಂದರ್ಭಗಳೆಲ್ಲಾ ವಿಷಯಗಳ ನಡುವೆ ಆಯ್ಕೆಗಳನ್ನು ನೀಡುವುದರಿಂದ ಮಗುವಿಗೆ ಸ್ವಲ್ಪ ಸಹಾಯಕವಾಗಬಹುದು. ಉದಾ: ಎರಡು ಬಟ್ಟೆ ಅಥವಾ ಎರಡು ಆಹಾರಗಳು. ಎರಡು ವಿಷಯಗಳ ನಡುವೆ ಒಂದನ್ನು ಆರಿಸುವ ಸಾಮರ್ಥ್ಯವು ಮಗುವಿಗೆ ನಿಯಂತ್ರಣದಲ್ಲಿರುವ ಭಾವನೆ ನೀಡುತ್ತದೆ.

ಬದಲಾವಣೆ/ ಪರಿವರ್ತನೆಗಳಿಗೆ ತಯಾರಿ: ಸಾಮಾನ್ಯವಾಗಿ, ಯಾವುದೇ ದಿಢೀರ್ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಮಕ್ಕಳಿಗೆ ಕಷ್ಟವಾಗುತ್ತದೆ. ಉದಾ: ಆಟದ ಮೈದಾನ ಅಥವಾ ಆಟಿಕೆ ಅಂಗಡಿಯಿಂದ ಹೊರಹೋಗುವಂತಹುವುದು. ಹಾಗಾಗಿ, ಮಕ್ಕಳಿಗೆ ಮುಂದೆ ಉಂಟಾಗಬಹುದಾದ ಪರಿವರ್ತನೆಯ ಎಚ್ಚರಿಕೆಯನ್ನು ನೀಡುವ ಮೂಲಕ ಅವರ ಮನಸ್ಸನ್ನು ಮುಂಚಿತವಾಗಿ ಸಿದ್ಧಪಡಿಸಲು ಪ್ರಯತ್ನಿಸಿ. ಇದು ಅವರನ್ನು ಬದಲಾವಣೆಗೆ ಸಿದ್ಧಗೊಳಿಸುತ್ತದೆ ಮತ್ತು ಕೋಪವನ್ನು ತಪ್ಪಿಸುತ್ತದೆ.

ಇದು ಬಹುಪಾಲು ಮಕ್ಕಳಿಗೆ ಸಹಾಯ ಮಾಡುವ ಸಾಮಾನ್ಯ ಸಲಹೆ, ನಿಮಗೆ ವೃತ್ತಿಪರ ಸಲಹೆ ಬೇಕಾದರೆ, ದಯವಿಟ್ಟು ಮನಶ್ಶಾಸ್ತ್ರಜ್ಞರನ್ನು ಸಂಪರ್ಕಿಸಿ