Dr C P Ravikumar

ಸಾಮಾನ್ಯವಾಗಿ ಮಕ್ಕಳು ಬೆಳೆದಂತೆ, ಪೋಷಕರು ಹಾಕಿದ ಕಟ್ಟು-ಪಾಡುಗಳನ್ನು ಮೀರಲು ಪ್ರಯತ್ನಿಸುತ್ತಾರೆ. ಮಕ್ಕಳಿಗೆ ಸ್ವತಂತ್ರ ಅಥವಾ ಸ್ವ-ಇಚ್ಚೆಯಿಂದಿರುವ ಹಾಗೂ ನಿಯಮಗಳನ್ನು ಮುರಿಯುವ ಮನಸ್ಥಿತಿ ಸಹಜವಾಗಿ ಇದ್ದೇ ಇರುತ್ತದೆ. ಇದು ಪೋಷಕರು ಮತ್ತು ಮಕ್ಕಳು –   ಈ ಇಬ್ಬರಿಗೂ ಕಿರಿಕಿರಿ ಮತ್ತು ಅಸಮಾಧಾನವನ್ನುಂಟು ಮಾಡುವ ಹಂತ. ಈ ಬಗೆಯ ವರ್ತನೆಯು ಮಗುವಿನ ಭಾವನಾತ್ಮಕ ಮತ್ತು ಮಾನಸಿಕ ಬೆಳವಣಿಗೆಯ ಭಾಗವಾಗಿದ್ದರೂ, ಕೆಲವು ಮಕ್ಕಳು ಪ್ರತಿ ನೀತಿ-ನಿಯಮಗಳನ್ನು ಧಿಕ್ಕರಿಸುವ ಪ್ರವೃತ್ತಿಯನ್ನು ತೋರಿಸುತ್ತಿರುತ್ತಾರೆ. ಈ ರೀತಿಯ ಅವಿಧೇಯತೆ ತೋರುವ ಮನೋಭಾವವು ಕುಟುಂಬ ಮತ್ತು ಶಾಲಾ ಪರಿಸರದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಹಾಗೂ ಶಿಕ್ಷಕರು ಮತ್ತು ಸ್ನೇಹಿತರೊಂದಿಗಿನ ಸಂಬಂಧದಲ್ಲಿ ಬಿರುಕು ಮೂಡಿಸುತ್ತದೆ.  

  ಮಗುವು ಪದೇ ಪದೇ ಕೋಪಗೊಳ್ಳುವ ಹಾಗೂ ಕಿರಿಕಿರಿಯುಂಟು ಮಾಡುವ ವರ್ತನೆ ತೋರುತ್ತಿದ್ದರೆ, ಅಥವಾ ವಾದಿಸುವ ಮತ್ತು ಸಿಡಿಮಿಡಿಗೊಳ್ಳುವ ಪ್ರವೃತ್ತಿಯನ್ನು ಪ್ರದರ್ಶಿಸಿದರೆ, ಮಗುವಿಗೆ ’ವಿರೋಧಿಸುವ ಮನೋಭಾವದ ನ್ಯೂನತೆ” (ಆಪೋಸಿಷನ್ ಡಿಫಿಯನ್ಸಿ ಡಿಸಾರ್ಡರ್/ Oppositional Defiance Disorder (ODD) ಇರಬಹುದು. 

  ಓಡಿಡಿಯು ವರ್ತನಾ ಸಮಸ್ಯೆಯಾಗಿದ್ದು, ಚಿಕ್ಕ ಮಕ್ಕಳಿಂದ ಪ್ರಾರಂಭಿಸಿ ಹದಿಹರೆಯದವರಲ್ಲಿಯೂ ಕಂಡು ಬರಬಹುದು. ಆದರೆ, ಓಡಿಡಿ ಸಮಸ್ಯೆಯನ್ನು ಗುರುತಿಸುವಲ್ಲಿ ಪೋಷಕರಿಗೆ ಕೆಲವೊಮ್ಮೆ ಗೊಂದಲವುಂಟಾಗಬಹುದು. ಏಕೆಂದರೆ, ಸಾಮಾನ್ಯವಾಗಿ 2 ವರ್ಷ ವಯಸ್ಸಿನಲ್ಲಿ ಮಕ್ಕಳ ಮನಸ್ಥಿತಿ ಮತ್ತು ನಡವಳಿಕೆಗಳಲ್ಲಿ ಕ್ಷಿಪ್ರ ಬದಲಾವಣೆಯಾಗುತ್ತಿರುತ್ತದೆ. ಈ ಕಾರಣದಿಂದಾಗಿ ಪೋಷಕರು ಈ ಮಕ್ಕಳ ತರಲೆ-ತುಂಟಾಟಗಳನ್ನು ನಿರ್ವಹಿಸಲು ಕಷ್ಟಪಡುವುದರಿಂದ, ಈ ವಯಸ್ಸನ್ನು “ಭಯಾನಕ 2 (terrible two’s) ” ಎಂದು ಭಾವಿಸುತ್ತಾರೆ. ಹಾಗಾಗಿ, ಇದು ಓಡಿಡಿ ಸಮಸ್ಯೆಯೇ ಅಥವಾ “ಭಯಾನಕ 2” ರ ಹಂತದ ಭಾಗವೇ ಎಂದು ಗೊಂದಲವಾಗುತ್ತದೆ. ಇನ್ನು ಹದಿಹರೆಯದವರಲ್ಲಿ ವಯಸ್ಸಿನ ಕಾರಣದಿಂದ ಈ ರೀತಿಯ ವರ್ತನೆಗಳು ಕಂಡುಬರುತ್ತಿರಬಹುದೇ? ಆ ನಿರ್ದಿಷ್ಟ ವಯಸ್ಸು ಮೀರಿದಂತೆ ಇದು ಕಡಿಮೆಯಾಗಬಹುದೇ? ಎಂದು ಪೋಷಕರು ಅಂದಾಜಿಸುತ್ತಾರೆ. ಹಾಗಾಗಿ, ಮಕ್ಕಳಲ್ಲಿ ಓಡಿಡಿ ಸಮಸ್ಯೆಯಿದೆಯೇ, ಇಲ್ಲವೇ ಎಂಬುದನ್ನು ತಿಳಿಯಲು ಮಾನಸಿಕ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಬೇಕಾಗುತ್ತದೆ.

  ಸಾಮಾನ್ಯವಾಗಿ ಇತರ ಮಾನಸಿಕ ಆರೋಗ್ಯ ಸಮಸ್ಯೆಯುಳ್ಳವರಲ್ಲಿ ಈ ಓಡಿಡಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದು ಸಮಾಜವಿರೋಧಿ ನ್ಯೂನತೆಯಂತಹ ವರ್ತನಾ ಸಮಸ್ಯೆಗಳಿಗೆ ಕಾರಣವಾಗಬಹುದು. ಓಡಿಡಿಯು ಈ ಕೆಳಗಿನ ನ್ಯೂನತೆಯುಳ್ಳ ಮಕ್ಕಳಲ್ಲಿ ಕಂಡು ಬರುವ ಸಾಧ್ಯತೆ ಹೆಚ್ಚು. ಅವೆಂದರೆ, 
 
  • ಅತಿ ಚಟುವಟಿಕೆ ಮತ್ತು ಗಮನ ಕೊರತೆ
  • ಕಲಿಕಾ ನ್ಯೂನತೆ
  • ಮನಸ್ಥಿತಿ ಏರುಪೇರಾಗುವ ನ್ಯೂನತೆ
  • ಆತಂಕದ ನ್ಯೂನತೆ
 
ಮಕ್ಕಳಲ್ಲಿ ಈ ಕೆಳಗಿನ ವರ್ತನೆಗಳು ಕಂಡುಬಂದಲ್ಲಿ, ಅದು  ಓಡಿಡಿ ಸಮಸ್ಯೆ ಎಂದು ಗುರುತಿಸಬಹುದು.
  • ವಿರೋಧಿಸುವ ಮತ್ತು ವಾದಿಸುವ ಮನೋಭಾವ
  • ಪ್ರತೀಕಾರ ಮತ್ತು ವೈರತ್ವದ ಮನಸ್ಥಿತಿ
  • ನಕಾರಾತ್ಮಕ ಮತ್ತು ದ್ವೇಷಪೂರಿತ ಮನಸ್ಸು
  • ನಿಯಮಗಳನ್ನು ಪ್ರಶ್ನಿಸುವುದು
  • ವಿನಂತಿಗಳನ್ನು ಅನುಸರಿಸಲು ನಿರಾಕರಿಸುವುದು
  • ಉದ್ದೇಶಪೂರ್ವಕವಾಗಿ ಇತರರಿಗೆ ಕಿರಿಕಿರಿಯುಂಟು ಮಾಡುವುದು ಅಥವಾ ತಾವೇ ಅಸಮಾಧಾನಕ್ಕೊಳಗಾಗುವುದು ಮತ್ತು ಸುಲಭವಾಗಿ ಸಿಟ್ಟಾಗುವುದು
  • ದುರ್ಬಲರನ್ನು ಬೆದರಿಸುವುದು ಅಥವಾ ಕಿರುಕುಳ ನೀಡುವುದು
  • ತಮ್ಮ ತಪ್ಪುಗಳಿಗಾಗಿ ಇತರರನ್ನು ದೂಷಿಸುವುದು
  • ಅಮೇರಿಕನ್ ಸೈಕಿಯಾಟ್ರಿಕ್ ಅಸೋಸಿಯೇಶನ್‌ನ (American Psychiatric Association) DSM5 (Diagnostic and Statistical Manual 5) ಪ್ರಕಾರ, ಮಗುವಿನಲ್ಲಿ ಕನಿಷ್ಠ ಆರು ತಿಂಗಳು ಈ ಮೇಲಿನ ರೋಗಲಕ್ಷಣಗಳು ಮುಂದುವರೆದಲ್ಲಿ, ಅದು ಓಡಿಡಿ ಸಮಸ್ಯೆಯಿರಬಹುದೆಂದು ಎಂದು ಅನುಮಾನಿಸಬಹುದು. 
 
ಓಡಿಡಿಯ ಕಾರಣಗಳು
ಓಡಿಡಿ ಉಂಟಾಗಲು ಯಾವುದೇ ಖಚಿತವಾದ ಕಾರಣಗಳಿಲ್ಲದಿದ್ದರೂ, ಜೈವಿಕ (ಆನುವಂಶಿಕ), ಮಾನಸಿಕ ಮತ್ತು ಸಾಮಾಜಿಕ ಅಂಶಗಳು ಸೇರಿದಂತೆ ವಿವಿಧ ಕಾರಣಗಳಿಂದ ಈ ಸಮಸ್ಯೆ ಕಂಡು ಬರಬಹುದು ಎಂದು ತಿಳಿದುಬಂದಿದೆ.  

ಎ. ಜೈವಿಕ ಅಂಶಗಳು:
ಪೋಷಕರು ಅತಿ ಚಟುವಟಿಕೆ ಮತ್ತು ಗಮನ ಕೊರತೆಯ ನ್ಯೂನತೆ ಹೊಂದಿದ್ದಲ್ಲಿ,
ಅಥವಾ ಅವರಿಗೆ ಮನಸ್ಥಿತಿ ಏರುಪೇರಾಗುವ ಸಮಸ್ಯೆಯಿದ್ದಲ್ಲಿ, ಮದ್ಯ ಅಥವಾ ಮಾದಕ ವ್ಯಸನಿಗಳಾಗಿದ್ದಲ್ಲಿ, ಮಗುವಿನಲ್ಲಿ ಸಹ ಓಡಿಡಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಅಪೌಷ್ಟಿಕತೆ, ವಿಷಕಾರಿ ಪದಾರ್ಥ ಸೇವನೆ ಅಥವಾ ಮಿದುಳಿನಲ್ಲಿನ ರಾಸಾಯನಿಕ ಅಸಮತೋಲನವೂ ಸಹ ಓಡಿಡಿ ಸಮಸ್ಯೆಗೆ ಕಾರಣವಾಗಬಹುದು.  

ಬಿ ಸಾಮಾಜಿಕ ಅಂಶಗಳು:
ಮನೆಯ ವಾತಾವರಣ ಸರಿಯಿಲ್ಲದರಿವುದು,
ಮಗುವಿಗೆ ಪೋಷಕರು ಇಲ್ಲದಿರುವುದು, ಅಸಮಂಜಸವಾದ ಶಿಸ್ತು ಕ್ರಮಗಳು (ಭೇದಭಾವ) ಅಥವಾ ಮಗುವಿನೆಡೆಗಿನ ನಿರ್ಲಕ್ಷ್ಯ ಸಿ ಮಾನಸಿಕ ಅಂಶಗಳು: ಪೋಷಕರು ಅಥವಾ ಕುಟುಂಬದೊಂದಿಗೆ ಉತ್ತಮ ಸಂಬಂಧವಿಲ್ಲದಿರುವುದು ಮತ್ತು ಸಾಮಾಜಿಕ ಸೂಚನೆಗಳನ್ನು ಅರ್ಥಮಾಡಿಕೊಳ್ಳಲು ಅಥವಾ ಸಂಬಂಧಗಳನ್ನು ಉಳಿಸಿಕೊಳ್ಳಲು ಅಸಮರ್ಥತೆ   

ಓಡಿಡಿ ಸಮಸ್ಯೆಯನ್ನು ಗುರುತಿಸುವುದು ಸಾಮಾನ್ಯವಾಗಿ ಈ ಓಡಿಡಿ ಸಮಸ್ಯೆಯನ್ನು ಮೊದಲು ಗುರುತಿಸಲು ಸಾಧ್ಯವಾಗುವುದು, ಪೋಷಕರು ಅಥವಾ ಶಾಲೆಯ ಶಿಕ್ಷಕರಿಂದ. ಪೋಷಕರಾಗಲೀ ಅಥವಾ ಶಾಲೆಗಳಾಗಲೀ ಮಗುವಿನ ವರ್ತನೆಯಲ್ಲಿನ ಬದಲಾವಣೆಯನ್ನು ಗುರುತಿಸಿ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿದಾಗ ಮಗುವಿಗೆ ಓಡಿಡಿ ಯ ಸಮಸ್ಯೆ ಇದೆಯೇ ಎಂಬುದನ್ನು ಪರೀಕ್ಷಿಸಬಹುದು. ಮಕ್ಕಳ ಮನೋವೈದ್ಯರಂತಹ ಮಾನಸಿಕ ಆರೋಗ್ಯ ವೃತ್ತಿಪರರು ಮಗುವಿನ ಆರೋಗ್ಯ ಹಿನ್ನಲೆಯ ವಿವರವಾದ ಮಾಹಿತಿ ಪಡೆದು ಪ್ರಶ್ನಾವಳಿಗಳ ಮೂಲಕ ಮೌಲ್ಯಮಾಪನ ನಡೆಸಿ ಮಗುವಿಗೆ ಓಡಿಡಿ ಸಮಸ್ಯೆ ಇದೆಯೇ, ಇಲ್ಲವೇ ಎಂಬುದನ್ನು ಪರೀಕ್ಷಿಸುತ್ತಾರೆ. 

ಚಿಕಿತ್ಸೆ: ಸಾಮಾನ್ಯವಾಗಿ, ಮಗು ಮತ್ತು ಕುಟುಂಬ ಎರಡನ್ನೂ ಒಳಗೊಂಡು ಓಡಿಡಿ ತರಬೇತಿ ನೀಡಲಾಗುತ್ತದೆ.. ಚಿಕಿತ್ಸಾ ವಿಧಾನಗಳು:
  1. ಪೋಷಕರ ನಿರ್ವಹಣಾ ತರಬೇತಿ ಮತ್ತು ಕುಟುಂಬ ತರಬೇತಿ
  2. ಮಗುವಿಗೆ ಗ್ರಹಿಕಾ ಸಮಸ್ಯೆ-ಪರಿಹರಿಸುವ ತರಬೇತಿ
  3. ಸಾಮಾಜಿಕ ಕೌಶಲ್ಯ ಕಾರ್ಯಕ್ರಮಗಳು
  4. ಔಷಧಗಳು: ಅತಿ ಚಟುವಟಿಕೆ ಮತ್ತು ಗಮನ ಕೊರತೆ, ಆತಂಕಗೊಳ್ಳುವ ಮತ್ತು ಮನಸ್ಥಿತಿ ಏರುಪೇರಾಗುವ ನ್ಯೂನತೆಯಂತಹ ಸಹ-ನ್ಯೂನತೆಗಳಿಗೆ ಚಿಕಿತ್ಸೆ ನೀಡುವುದರಿಂದ ಓಡಿಡಿಯ ಲಕ್ಷಣಗಳು ಸಹ ಸುಧಾರಿಸುತ್ತವೆ.

ಸೂಚನೆ: ಮೇಲಿನ ಮಾಹಿತಿಯು ಅರಿವು ಮತ್ತು ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರವೇ ಹೊರತು, ಇದನ್ನು ಯಾವುದೇ ಆರೋಗ್ಯ ಸ್ಥಿತಿಯ ರೋಗನಿರ್ಣಯ ಅಥವಾ ಚಿಕಿತ್ಸೆಯಲ್ಲಿ ಬಳಸಲಾಗುವುದಿಲ್ಲ. ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಸಂದೇಹ ಅಥವಾ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ವೈದ್ಯರೊಂದಿಗೆ ಸಮಾಲೋಚಿಸಿ.
Picture of Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore