Site icon Dr C P Ravikumar

ಸೆಪ್ಟೆಂಬರ್ – ನವಜಾತ ಶಿಶು ತಪಾಸಣಾ ಜಾಗೃತಿ ಮಾಸ

Newborn
ಸೆಪ್ಟೆಂಬರ್ – ನವಜಾತ ಶಿಶು ತಪಾಸಣಾ ಜಾಗೃತಿ ಮಾಸ
ಸೆಪ್ಟೆಂಬರ್ – ನವಜಾತ ಶಿಶು ತಪಾಸಣಾ ಜಾಗೃತಿ ಮಾಸ (New Born Screening (NBS) Awareness Month)
ಮಕ್ಕಳ ಸಹಜ ಹಾಗೂ ಆರೋಗ್ಯಕರ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಗಂಭೀರವಾದ ಆದರೆ, ಅಪರೂಪದ ಕಾಯಿಲೆಗಳನ್ನು ಗುರುತಿಸಿ ಚಿಕಿತ್ಸೆ ನೀಡುವ ಸಲುವಾಗಿ ರೂಪಿಸಿರುವ ಕಾರ್ಯಕ್ರಮ.

ನವಜಾತ ಶಿಶುವಿನ ತಪಾಸಣೆ ಎಂದರೇನು?
ಇದು ಹಲವು ಪರೀಕ್ಷೆಗಳನ್ನು ಒಳಗೊಂಡಿದ್ದು, ಮಗುವಿನ ಜನನದ ಸಮಯದಲ್ಲಿ ಪತ್ತೆ ಮಾಡಲು ಸಾಧ್ಯವಾಗದ ಹಲವು ನ್ಯೂನತೆಗಳನ್ನು ಈ ನವಜಾತ ಶಿಶುವಿನ ತಪಾಸಣೆಯಡಿ ಗುರುತಿಸಲಾಗುತ್ತದೆ.
ಈ ತಪಾಸಣೆಯಲ್ಲಿ ಮಗುವಿನಲ್ಲಿ ಅಪರೂಪದ ಹಾಗೂ ಮಾರಣಾಂತಿಕ ಕಾಯಿಲೆಗಳಿವೇ ಎಂದು ಪರೀಕ್ಷಿಸಲಾಗುತ್ತದೆ. ಇದು, ರಕ್ತ, ಶ್ರವಣ ಮತ್ತು ಹೃದಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ.

ತಪಾಸಣೆಯನ್ನು ಏಕೆ ಮಾಡಿಸಬೇಕು?
ಕೆಲವೊಮ್ಮೆ ಮಕ್ಕಳು ಮೇಲ್ನೋಟಕ್ಕೆ ಆರೋಗ್ಯವಾಗಿ ಕಾಣಿಸಿದರೂ ಜನಿಸುವಾಗಲೇ ಗಂಭೀರವಾದ ಕಾಯಿಲೆ ಹೊಂದಿದ್ದು, ಪ್ರಾರಂಭದಲ್ಲಿ ಯಾವುದೇ ಚಿಹ್ನೆಗಳು ಅಥವಾ ರೋಗಲಕ್ಷಣಗಳು ಗೋಚರಿಸದಿರಬಹುದು. ಹಾಗಾಗಿ, ನವಜಾತ ಶಿಶುವಿನ ತಪಾಸಣೆಯ ಸಹಾಯದಿಂದ ಗಂಭೀರವಾದ ಆರೋಗ್ಯ ಸ್ಥಿತಿಯನ್ನು ಮೊದಲೇ ಪತ್ತೆ ಹಚ್ಚಿದರೆ, ಸೂಕ್ತ ಚಿಕಿತ್ಸೆ ನೀಡಬಹುದಾದ ಸಾಧ್ಯತೆಗಳು ಹೆಚ್ಚಿರುತ್ತವೆ.
ರಕ್ತ ಪರೀಕ್ಷೆಯನ್ನು ಕೈಗೊಳ್ಳುವ ಮೂಲಕ ಮಗುವಿನ ಚಯಾಪಚಯ ಸಾಮರ್ಥ್ಯ, ಆನುವಂಶಿಕ ಅಥವಾ ಹಾರ್ಮೋನುಗಳ ಕಾಯಿಲೆಗಳನ್ನು ಪರೀಕ್ಷಿಸಬಹುದು. ಸಮಸ್ಯೆಯನ್ನು ಆದಷ್ಟು ಶೀಘ್ರವಾಗಿ ಪತ್ತೆಹಚ್ಚಿದಲ್ಲಿ, ನೀಡಲಾಗುವ ಚಿಕಿತ್ಸೆ ಹಾಗೂ ಅದರ ಫಲಿತಾಂಶವು ಸಹ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. 1,2

ನವಜಾತ ಶಿಶುವಿನ ತಪಾಸಣೆಯ ಉದ್ದೇಶ
ಶಿಶುಗಳಲ್ಲಿ ಜನನದಿಂದಲೇ ಕಂಡುಬರುವ ಆರೋಗ್ಯ ಸಮಸ್ಯೆಗಳ ರೋಗಲಕ್ಷಣಗಳನ್ನು ಶೀಘ್ರವಾಗಿ ಪತ್ತೆ ಮಾಡುವುದು, ಈ ನವಜಾತ ಶಿಶು ತಪಾಸಣಾ ಕಾರ್ಯಕ್ರಮದ ಮುಖ್ಯ ಉದ್ದೇಶ. ಇದು ದೀರ್ಘಕಾಲೀನ ಮಾರಣಾಂತಿಕ ಸಮಸ್ಯೆಗಳು ಉಂಟು ಮಾಡುಬಹುದಾದ ಪರಿಣಾಮಗಳನ್ನು (ಅಸ್ವಸ್ಥತೆ ಮತ್ತು ಮರಣ) ಕಡಿಮೆ ಮಾಡಲು ಸಹಾಯ ಮಾಡುತ್ತದೆ .

ಸಾಮಾನ್ಯವಾಗಿ ಈ ಕೆಳಗಿನ ಸಮಸ್ಯೆಗಳಿಗೆ ನವಜಾತ ಶಿಶು ತಪಾಸಣೆ ಕೈಗೊಳ್ಳಬೇಕಾಗಬಹುದು.

ಪರೀಕ್ಷೆಗಳ ಪಟ್ಟಿ ರಕ್ಷಪರೀಕ್ಷೆ

ಚಯಾಪಚಯ ನ್ಯೂನತೆಗಳು
  1. ಪಿಕೆಯು ಮತ್ತು ಹೈಪರ್ಫೆನೈಲಾಲನಿನೆಮಿಯಾ (PKU and Hyperphenylalaninemia)
  2. ಟೈರೋಸಿನೆಮಿಯಾ (Tyrosinemia)
  3. ಮೀಥೈಲ್ ಮಲೋನಿಕ್ ಅಸಿಡೆಮಿಯಾ (Methylmalonic acidemia)
ಹಾರ್ಮೋನಲ್ ನ್ಯೂನತೆಗಳು
  1. ಜನ್ಮಜಾತ ಹೈಪೋಥೈರಾಯ್ಡಿಸಮ್ (Congenital Hypothyroidism)- ಈ ಸಮಸ್ಯೆ ಉಂಟಾಗುವ ಸಂಭವ ಹೆಚ್ಚು ಮತ್ತು ಇದು ಬೌದ್ಧಿಕ ಅಂಗವೈಕಲ್ಯವನ್ನು ಉಂಟುಮಾಡುವ ಸಾಧ್ಯತೆಯಿರುತ್ತದೆ.
  2. ಜನ್ಮಜಾತ ಅಡ್ರಿನಲ್ ಹೈಪರ್ಪ್ಲಾಸಿಯಾ (Congenital Adrenal Hyperplasia)- ಜನನದ ಸಮಯದಲ್ಲಿ ಈ ಸಮಸ್ಯೆಯನ್ನು ಪತ್ತೆ ಮಾಡಲು ಸಾಧ್ಯವಾಗದಿದ್ದಲ್ಲಿ, ಮಾರಕ ಪರಿಣಾಮಗಳನ್ನುಂಟು ಮಾಡಬಹುದು.
ಹಿಮೋಗ್ಲೋಬಿನ್ ನ್ಯೂನತೆಗಳು
  1. ಬೀಟಾ ಥಲಸ್ಸೆಮಿಯಾ (Beta Thalassemia)
  2. ಸಿಕಲ್ ಸೆಲ್ ಡಿಸೀಸ್ (Sickle Cell Disease)
ಇತರ ನ್ಯೂನತೆಗಳು
  1. ಗ್ಯಾಲಕ್ಟೋಸೆಮಿಯಾ (Galactosemia)
  2. ಸಿಸ್ಟಿಕ್ ಫೈಬ್ರೋಸಿಸ್ (Cystic fibrosis)
  3. ಸ್ಪೈನಲ್ ಮಸಲ್ ಅಟ್ರೊಫಿ (Spinal muscle atrophy)
  4. ಸೀವಿಯರ್ ಕಂಬೈನ್ಡ್ ಇಮ್ಯೂನೊಡಿಫೀಸಿಯೆನ್ಸಿ (Severe combined Immunodeficiency)
  5. ಎಕ್ಸ್ಲಿಂಕ್ಡ್ ಅಡ್ರೆನೊಲುಕೋಡೈಸ್ಟ್ರೋಫಿ (X-Linked Adrenoleukodystrophy)

ಮಗುವಿನಲ್ಲಿ ಶ್ರವಣ ದೋಷವಿದೆಯೇ ಎಂಬುದನ್ನು ಈ ತಪಾಸಣೆಯಲ್ಲಿ ಪರೀಕ್ಷಿಸಲಾಗುತ್ತದೆ
ಶ್ರವಣ ಪರೀಕ್ಷೆ

ಭಾರತದಲ್ಲಿ ಪರೀಕ್ಷೆಗೊಳಪಡುವ ಒಟ್ಟು 1000 ಶಿಶುಗಳಲ್ಲಿ ಸರಿಸುಮಾರು 1 ರಿಂದ 8 ಶಿಶುಗಳಲ್ಲಿ ಜನ್ಮಜಾತ ಶ್ರವಣದೋಷವಿರುವುದು ಕಂಡುಬಂದಿದೆ. ಶ್ರವಣ ದೋಷವಿರುವ ಶಿಶುಗಳಲ್ಲಿ ನಿಧಾನಗತಿಯ ಭಾಷಾ ಬೆಳವಣಿಗೆ, ವರ್ತನಾ ಸಮಸ್ಯೆಗಳು, ಭಾಷೆಯ ಮತ್ತು ಶೈಕ್ಷಣಿಕ ಪ್ರಗತಿ ಕುಂಠಿತವಾಗುವುದು ಮತ್ತು ಸಾಮಾಜಿಕ ಕಾರ್ಯಕ್ಷಮತೆ ಕ್ಷೀಣಗೊಳ್ಳುವಂತಹ ಸಮಸ್ಯೆಗಳು ಕಂಡು ಬರಬಹುದು.
ಮಗು ಜನಿಸಿದ ಆರು ತಿಂಗಳ ಒಳಗಾಗಿ ಚಿಕಿತ್ಸೆ ಪ್ರಾರಂಭಿಸದಿದ್ದಲ್ಲಿ, ಶಾಶ್ವತ ಶ್ರವಣ ನಷ್ಟ ಮತ್ತು ಮಾತಿನ ಬೆಳವಣಿಗೆಯಲ್ಲಿ ಸಮಸ್ಯೆಯುಂಟಾಗುವ ಸಾಧ್ಯತೆ ಅಧಿಕ.
ಪ್ರಕ್ರಿಯೆ
ಮಗುವಿನ ಕಿವಿಗಳಲ್ಲಿ  ಸಣ್ಣ ಇಯರ್‌ಫೋನ್‌ಗಳನ್ನು ಇಟ್ಟು, ವಿಶೇಷ ಕಂಪ್ಯೂಟರ್‌ಗಳನ್ನು ಬಳಸಿ ಕೆಲವು ಶಬ್ದಗಳಿಗೆ ಮಗು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಪರೀಕ್ಷಿಸಲಾಗುತ್ತದೆ.

ಹೃದಯ ಪರೀಕ್ಷೆ
ಶೇ 5-10% ಶಿಶುಗಳ ಸಾವಿಗೆ ಕಾರಣವಾಗುವ ಹೃದಯ ಸಮಸ್ಯೆಗಳು (ಜನ್ಮಜಾತ ಹೃದಯ ತೊಂದರೆಗಳು) ಹಾಗೂ ಮಾರಕವೆನಿಸುವ (ಶೇ 25 %) ಹೃದಯ ವೈಪರೀತ್ಯಗಳನ್ನು ಈ ಬಗೆಯ ತಪಾಸಣೆಯಲ್ಲಿ ಪತ್ತೆಹಚ್ಚಲಾಗುತ್ತದೆ.
ಪರೀಕ್ಷೆ
ಹೃದಯ ಬಡಿತದ ಆಕ್ಸಿಮೆಟ್ರಿ (ಈ ಪರೀಕ್ಷೆಯು ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ಪರಿಶೀಲಿಸುತ್ತದೆ)

ಭಾರತದಲ್ಲಿ ನವಜಾತ ಶಿಶು ತಪಾಸಣೆಯ ಕಾರ್ಯನೀತಿ
ಸದ್ಯಕ್ಕೆ, ಭಾರತದಲ್ಲಿ ನವಜಾತ ಶಿಶು ತಪಾಸಣೆಗೆ ಸಂಬಂಧಿಸಿದಂತೆ ಯಾವುದೇ ನೀತಿಯನ್ನು ಸ್ವೀಕರಿಸದಿಲ್ಲದಿರುವುದಿಂದ, ಅದಕ್ಕೆ ಯಾವುದೇ ನಿರ್ದಿಷ್ಟ ಸರ್ಕಾರಿ ನೀತಿ ಇಲ್ಲ. ಹಾಗಾಗಿ, ಇದರ ಬದಲಾಗಿ, ಸಾರ್ವತ್ರಿಕ ತಪಾಸಣೆ ಕಾರ್ಯಕ್ರಮವನ್ನು ಪರಿಚಯಿಸಲಾಗಿದೆ.
ವಿವಿಧ ಕಾಯಿಲೆಗಳಿಂದ ಉಂಟಾಗುತ್ತಿದ್ದ ನವಜಾತ ಶಿಶುಗಳ ಸಾವಿನ ಅಂಕಿಅಂಶಗಳನ್ನು ಗಮನಿಸಿ ಹಾಗೂ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ನವಜಾತ ಶಿಶುವಿನ ತಪಾಸಣೆಯ ಮಹತ್ತರ ಪಾತ್ರವನ್ನು ಅರಿತುಕೊಂಡು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ICMR )2008 ರಲ್ಲಿ ಮಲ್ಟಿ-ಸೆಂಟ್ರಲ್ ಪ್ರೋಗ್ರಾಂ  (multi-central program) ಅನ್ನು ಪ್ರಾರಂಭಿಸಿತು. ಆರಂಭದಲ್ಲಿ ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಈ ಕಾರ್ಯಕ್ರಮವನ್ನು ಪರಿಚಯಿಸಲಾಯಿತು. ಪ್ರಾರಂಭದಲ್ಲಿ 100,000 ನವಜಾತ ಶಿಶುಗಳಲ್ಲಿ ಜನ್ಮಜಾತ ಹೈಪೋಥೈರಾಯ್ಡಿಸ್ ಇದೆಯೇ ಎಂಬುದನ್ನು ಪರೀಕ್ಷಿಸಲಾಯಿತು.
ಗೋವಾ ಸರ್ಕಾರವು 2008 ರಲ್ಲಿ  ನವಜಾತ ಶಿಶು ತಪಾಸಣೆಯನ್ನು ಕಡ್ಡಾಯಗೊಳಿಸಿತು.

ಭಾರತದ ಪರಿಸ್ಥಿತಿ
ತಪಾಸಣೆ ನಡೆಸಲು ಪ್ರಸ್ತಾಪಿಸಲಾದ ಆರೋಗ್ಯ ಸಮಸ್ಯೆಗಳು ಈ ಕೆಳಕಂಡಂತಿವೆ:
  • ಶ್ರವಣದೋಷ
  • ಜನ್ಮಜಾತ ಹೈಪೋಥೈರಾಯ್ಡಿಸಮ್ (Congenital hypothyroidism)
  • ಜನ್ಮಜಾತ ಮೂತ್ರಜನಕಾಂಗದ ಹೈಪರ್ಪ್ಲಾಸಿಯಾ (Congenital adrenal hyperplasia (CAH))
  • ಗ್ಲುಕೋಸ್ -6-ಫಾಸ್ಫೇಟ್ ಡಿಹೈಡ್ರೋಜಿನೇಸ್ ಕೊರತೆ (Glucose-6-phosphate dehydrogenase (GP6PD) deficiency)

ಭಾರತದಲ್ಲಿ ನವಜಾತ ಶಿಶು ತಪಾಸಣೆ ಕಾರ್ಯನೀತಿಯ ಅಗತ್ಯ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಶಿಶು ಮರಣ ಪ್ರಮಾಣ ಶೇ 50 ಕ್ಕಿಂತ ಕಡಿಮೆ ಇರುವ ದೇಶಗಳಲ್ಲಿ ಆನುವಂಶಿಕ ಸೇವೆಗಳನ್ನು ಆರಂಭಿಸಬೇಕು. ಭಾರತದಲ್ಲಿ ಶಿಶು ಮರಣ ಪ್ರಮಾಣ ಈಗಾಗಲೇ ಶೇ 40 ರಷ್ಟನ್ನು ತಲುಪಿದ್ದು, ಇದು ನಮ್ಮ ದೇಶದಲ್ಲಿ ನವಜಾತ ಶಿಶು ತಪಾಸಣೆಯನ್ನು ಪರಿಚಯಿಸುವ ಅಗತ್ಯವನ್ನು ಸೂಚಿಸುತ್ತದೆ.
ಒಟ್ಟು 2.7 ಕೋಟಿ ಶಿಶುಗಳಲ್ಲಿ, ಸುಮಾರು 5: 1000 ಪ್ರಮಾಣದಷ್ಟು ಮಕ್ಕಳು ಶ್ರವಣ ದೋಷ ಮತ್ತು ಜನ್ಮಜಾತ ಹೃದಯ ರೋಗಗಳಿಂದ ಬಳಲುತ್ತಿದ್ದಾರೆ. ಇವುಗಳನ್ನೊಳಗೊಂಡಂತೆ ಜನನದಿಂದಲೇ ಕಂಡುಬರುವ ಇತರ ಹಲವು ರೋಗಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡದಿದ್ದರೆ, ಈ ಮಕ್ಕಳಲ್ಲಿ ಹೆಚ್ಚಿನವರಿಗೆ ಶಾಶ್ವತ ಕಲಿಕಾ ನ್ಯೂನತೆಗಳು, ಬುದ್ಧಿಮಾಂದ್ಯತೆ, ವರ್ತನಾ ಸಮಸ್ಯೆಗಳು ಮತ್ತು ಸಾಮಾಜಿಕ ಅಪಸಾಮಾನ್ಯತೆಯಂತಹ ಸಮಸ್ಯೆಗಳು ಕಂಡುಬರಬಹುದು. ಈ ನ್ಯೂನತೆಗಳು ಪೋಷಕರಿಗೆ ಭಾವನಾತ್ಮಕವಾಗಿ ಮಾತ್ರವಲ್ಲದೆ, ಆರ್ಥಿಕವಾಗಿಯೂ ಸಹ ತೊಂದರೆಯನ್ನುಂಟು ಮಾಡುತ್ತವೆ.
ಇಂತಹ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಎನ್‌ಬಿಎಸ್ (NBS) ಅತ್ಯಂತ ಪರಿಣಾಮಕಾರಿ ಮತ್ತು ಹೆಚ್ಚು ತರ್ಕಬದ್ಧವಾದ ಕಾರ್ಯಕ್ರಮವಾಗಿರುವುದರಿಂದ, ಭಾರತ ಸರ್ಕಾರವು ಈ ಎಲ್ಲಾ ಉತ್ತಮ ಅಂಶಗಳನ್ನು ಪರಿಗಣಿಸಿ, ಎನ್ ಬಿ ಎಸ್ ನ ರಾಷ್ಟ್ರೀಯ ನೀತಿಯ ಅನುಷ್ಠಾನಕ್ಕೆ ಸಮರ್ಥ ಕಾರ್ಯತಂತ್ರವನ್ನು ಪರಿಚಯಿಸಲು ಕ್ರಮ ಕೈಗೊಳ್ಳಬೇಕು.

ಭಾರತದಲ್ಲಿನ ಸಮಸ್ಯೆಗಳು
ಭಾರತದಲ್ಲಿ ನವಜಾತ ಶಿಶು ತಪಾಸಣಾ ಕಾರ್ಯಕ್ರಮವನ್ನು ಸೂಕ್ತ ರೀತಿಯಲ್ಲಿ ಕಾರ್ಯಗತಗೊಳಿಸುವ ಹಾದಿಯಲ್ಲಿ ಹಲವಾರು ಪ್ರಮುಖ ಸಮಸ್ಯೆಗಳಿವೆ. ಕಾರ್ಯಕ್ರಮದ ಕುರಿತು ಅರಿವಿನ ಕೊರತೆ, ಉಂಟಾಗಬಹುದಾದ ವೆಚ್ಚದ ಬಗ್ಗೆ ತಿಳುವಳಿಕೆ ಇಲ್ಲದಿರುವುದು, ಸಾರ್ವಜನಿಕ ನೀತಿ, ರಾಜಕೀಯ ಇತರೆ ಅವುಗಳಲ್ಲಿ ಪ್ರಮುಖವಾದುವು.
ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಎಲ್ಲಾ ನ್ಯೂನತೆಗಳ ಪರೀಕ್ಷೆಗಾಗಿ ನಗರ ಪ್ರದೇಶಗಳ ಎಲ್ಲ ಆಸ್ಪತ್ರೆಗಳಲ್ಲಿ ನವಜಾತ ಶಿಶು ತಪಾಸಣಾ ಕಾರ್ಯಕ್ರಮವನ್ನು ಪ್ರಾರಂಭಿಸಬೇಕು. ತಪಾಸಣೆ ಕೈಗೊಳ್ಳಬೇಕಾದ ನ್ಯೂನತೆಗಳ ಪಟ್ಟಿ ಹೀಗಿದೆ:
  • ಜನ್ಮಜಾತ ಹೈಪೋಥೈರಾಯ್ಡಿಸಮ್ (Congenital hypothyroidism)
  • ಜನ್ಮಜಾತ ಮೂತ್ರಜನಕಾಂಗದ ಹೈಪರ್ಪ್ಲಾಸಿಯಾ (Congenital adrenal hyperplasia (CAH))
  • ಗ್ಲುಕೋಸ್ -6-ಫಾಸ್ಫೇಟ್ ಡಿಹೈಡ್ರೋಜಿನೇಸ್ ಕೊರತೆ (Glucose-6-phosphate dehydrogenase (GP6PD) deficiency)
ಈ ಕಾರ್ಯಕ್ರಮಗಳು ಒಮ್ಮೆ ಕಾರ್ಯಗತಗೊಂಡ ನಂತರ, ಮತ್ತಷ್ಟು ಕಾರ್ಯನೀತಿಗಳನ್ನು ಪರಿಚಯಿಸಬಹುದು. ಇದಕ್ಕಾಗಿ ಹೆಚ್ಚೆಚ್ಚು ವೈದ್ಯರಿಗೆ ಅಗತ್ಯ ತರಬೇತಿಯೊಂದಿಗೆ ಸಾಕಷ್ಟು ಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ.

ಉಲ್ಲೇಖಗಳು
  1. Almannai M, Marom R, Sutton VR. Newborn screening: a review of history, recent advancements, and future perspectives in the era of next generation sequencing. Curr Opin Pediatr. 2016 Dec;28(6):694-699. doi: 10.1097/MOP.0000000000000414. PMID: 27552071.
  2. Bailey DB Jr, Skinner D, Warren SF. Newborn screening for developmental disabilities: reframing presumptive benefit. Am J Public Health. 2005 Nov;95(11):1889-93. doi: 10.2105/AJPH.2004.051110. Epub 2005 Sep 29. PMID: 16195526; PMCID: PMC1449454.
Picture of Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore

Exit mobile version