ಜೆನರಿಕ್ vs ಬ್ರ್ಯಾಂಡೆಡ್ ಜೆನರಿಕ್ vs ಬ್ರ್ಯಾಂಡೆಡ್ ಔಷಧಿಗಳು
ಪೋಷಕರ ಅಥವಾ ರೋಗಿಗಳ ಮಾಹಿತಿ ಕೈಪಿಡಿ
ಈ ಕೈಪಿಡಿಯಲ್ಲಿ ಔಷಧಿಗಳ ಕುರಿತು ಆಸಕ್ತಿಕರ ವಿಷಯವೊಂದನ್ನು ಚರ್ಚಿಸಲಾಗಿದೆ. ಸಾಮಾನ್ಯವಾಗಿ, ನಾವೆಲ್ಲರೂ ಒಂದಿಲ್ಲೊಂದು ಬಾರಿ ಈ ಪದಗಳನ್ನು ಕೇಳಿರುತ್ತೇವೆ ಮತ್ತು ಅವು ನಮ್ಮ ಮೇಲೆ ಪರಿಣಾಮವನ್ನು ಸಹ ಬೀರಿರುತ್ತವೆ. ಆದರೆ, ದುಃಖಕರ ವಿಷಯವೇನೆಂದರೆ, ನಮ್ಮಲ್ಲಿ ಅನೇಕರಿಗೆ ಇದರ ಅರ್ಥವೇನೆಂದು ತಿಳಿದಿಲ್ಲ. ಹಾಗಾಗಿ, ನಾವಿಲ್ಲಿ ವಿಷಯವನ್ನು ಸರಳಗೊಳಿಸಿ ಅರಿವು ಮೂಡಿಸುವ ಮೂಲಕ ಜನಸಾಮಾನ್ಯರು ಸರಿಯಾದ ಆಯ್ಕೆ ಮಾಡುವಂತೆ ಪ್ರೇರೇಪಿಸುವ ಸಣ್ಣ ಪ್ರಯತ್ನ. ಮಾಡುತ್ತಿದ್ದೇವೆ.
ಔಷಧಿ ಎಂದರೇನು?
ನೈಸರ್ಗಿಕವಾಗಿ ಉಂಟಾಗುವ ಅಥವಾ ತಯಾರಿಸಲಾದ ಮತ್ತು ಸೇವಿಸಿದಾಗ ದೈಹಿಕ ಕಾರ್ಯಚಟುವಟಿಕೆಯ ಮೇಲೆ ಪ್ರಭಾವ ಬೀರುವ ಯಾವುದೇ ಒಂದು ವಸ್ತು.
ಔಷಧಿಯ ವಿಕಾಸ ಹೇಗೆ?
ಒಮ್ಮೆ ರೋಗವನ್ನು ಗುರುತಿಸಿದ ನಂತರ, ವಿಜ್ಞಾನಿಗಳು ಅದರ ಶಾರೀರಿಕ ಪ್ರಕ್ರಿಯೆಯ ಕುರಿತು ಅಂದರೆ, ದೇಹದಲ್ಲಿ ರೋಗವು ಹೇಗೆ ಹೆಚ್ಚಾಗುತ್ತದೆ ಎಂಬುದರ ಬಗ್ಗೆ ಹಂತ ಹಂತವಾಗಿ.ಅಧ್ಯಯನ ಮಾಡುತ್ತಾರೆ.
ಒಂದು ಬಾರಿ ಮೇಲಿನ ಕ್ರಿಯೆ ಪೂರ್ಣಗೊಂಡ ಬಳಿಕ, ರೋಗದ ಪ್ರಾಥಮಿಕ ಹಂತವನ್ನು ಗುರುತಿಸಿ ಅದು ಮತ್ತಷ್ಟು ಹೆಚ್ಚಾಗುವುದನ್ನು ತಡೆಯಲಾಗುತ್ತದೆ. ಈ ಹಂತದಲ್ಲಿ ಅದರ ಪ್ರಗತಿಯನ್ನು ಕೊನೆಗಾಣಿಸಲು ಔಷಧಿಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಈ ಆಧುನಿಕ ಯುಗದಲ್ಲಿ ಔಷಧಿಯ ಅಭಿವೃದ್ಧಿಯು ಲ್ಯಾಬ್‌ನಲ್ಲಿ (ಅಂದರೆ ಕಚೇರಿ), ಪ್ರಾರಂಭವಾಗುತ್ತದೆ. ಅಲ್ಲಿ ಸೂಪರ್ ಕಂಪ್ಯೂಟರ್‌ಗಳು ಮತ್ತು ಬುದ್ಧಿವಂತರು ಒಟ್ಟಾಗಿ ಕೆಲಸ ಮಾಡಿ ಹಲವಾರು ಅಣುಗಳನ್ನು ಅಭಿವೃದ್ಧಿಪಡಿಸಿ ಕಾರ್ಯನಿರ್ವಹಿಸುತ್ತಾರೆ. ಸಾಮಾನ್ಯವಾಗಿ, ಅಂತಹ ಹಲವಾರು ಔಷಧಿಯ ಪರಿಕಲ್ಪನೆಗಳನ್ನು ಅಭಿವೃದ್ಧಿಪಡಿಸಿ, ಅಂತಿಮವಾಗಿ ಒಂದು (ಅಥವಾ ಹೆಚ್ಚಿನ) ಔಷಧಿಗಳನ್ನು ಅದರ ಯಶಸ್ಸಿನ ಸಂಭವನೀಯತೆಗಳ ಆಧಾರದ ಮೇಲೆ ಕಿರುಪಟ್ಟಿ ಮಾಡಲಾಗುತ್ತದೆ.
ಮುಂದಿನ ಹಂತವು ಪ್ರಾಣಿಗಳ ಮೇಲೆ ಪ್ರಯೋಗ ನಡೆಸುವುದು. ಇದು ಈ ಅಣುವಿನ ಯಾವುದೇ ವಿಷಕಾರಿ (ಗಂಭೀರ ಅಡ್ಡಪರಿಣಾಮ) ಪರಿಣಾಮಗಳ ಅಧ್ಯಯನವನ್ನು ಒಳಗೊಳ್ಳುತ್ತದೆ. ಇದಾದ ನಂತರ, ಔಷಧಿಯನ್ನು ಅಭಿವೃದ್ಧಿಪಡಿಸಿದ ದೇಶವು ಮಾನವರ ಮೇಲಿನ ವೈದ್ಯಕೀಯ ಪ್ರಯೋಗಕ್ಕಾಗಿ ನಿಯಂತ್ರಕ ಸಂಸ್ಥೆಗೆ ಅರ್ಜಿ ಸಲ್ಲಿಸಬೇಕು (ಯುಎಸ್‌ಎ ನಲ್ಲಿ ಎಫ್ ಡಿ ಎ, ಇಯುನಲ್ಲಿ ಇಎಂಎ).
ವೈದ್ಯಕೀಯ ಪ್ರಯೋಗಗಳನ್ನು ಹಲವಾರು ಹಂತಗಳಲ್ಲಿ ನಡೆಸಲಾಗುತ್ತದೆ; ಹಂತ 0, 1, 2, 3, 4 ಹೀಗೆ. ಈ ಎಲ್ಲಾ ಹಂತಗಳನ್ನು ದಾಟಿದ ನಂತರ ಔಷಧವು ಅಡ್ಡಪರಿಣಾಮಗಳಿಗಿಂತ ಹೆಚ್ಚಾಗಿ ಪ್ರಯೋಜನಕಾರಿ ಅಂಶಗಳನ್ನು ಒಳಗೊಂಡಿದೆ ಅಥವಾ ಉತ್ತಮ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಸಾಬೀತಾದಲ್ಲಿ, ಅಂತಹ ಔಷಧಿಗೆ ಅನುಮೋದನೆ ನೀಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಔಷಧವು ಮಾರುಕಟ್ಟೆಯಲ್ಲಿ ಲಭ್ಯವಾದ ನಂತರ, ಅದರ ಅಭಿವೃದ್ಧಿಯ ಹಂತದಲ್ಲಿ ಬಹಿರಂಗವಾಗದ ಯಾವುದೇ ಪ್ರಯೋಜನ ಅಥವಾ ಅಡ್ಡಪರಿಣಾಮವನ್ನು ತಿಳಿಯಲು ಅದನ್ನು ಹಲವಾರು ವರ್ಷಗಳವರೆಗೆ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ.
ಈ ಸಂಪೂರ್ಣ ಪ್ರಕ್ರಿಯೆಯನ್ನು ‘ಪರಿಕಲ್ಪನೆ – ಮಾರುಕಟ್ಟೆ ಹಂತ’ ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯು ಹಲವಾರು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಮಾತ್ರವಲ್ಲದೆ. ಈ ಹಂತದಲ್ಲಿ ಹಲವಾರು ನಿಯಮಗಳು, ಅನುಮೋದನೆಗಳು ಮತ್ತು ಪ್ರಯೋಗಗಳ ಮೂಲಕ ಹಾದು ಹೋಗಬೇಕಾಗುತ್ತದೆ. ಇದಕ್ಕಾಗಿ ಲಕ್ಷದಿಂದ ಶತಕೋಟಿ ಡಾಲರ್‌ಗಳಷ್ಟು ಖರ್ಚಾಗುತ್ತದೆ. ಸಾಮಾನ್ಯವಾಗಿ, ಈ ಹಣವನ್ನು ಔಷಧಿ ಅಭಿವೃದ್ಧಿಪಡಿಸಿದವರು ಅಥವಾ ಫಾರ್ಮಾ ಕಂಪನಿ ಖರ್ಚು ಮಾಡುತ್ತವೆ. ನಂತರ, ಹೂಡಿಕೆ ಮಾಡಿದ ಹಣವನ್ನು ಮರಳಿ ಪಡೆಯಲು, ಸರ್ಕಾರಗಳು ಔಷಧಿಗೆ ಪೇಟೆಂಟ್ ಹೊಂದಲು ಅನುಮತಿ ನೀಡುತ್ತವೆ.
ಪೇಟೆಂಟ್ ಹೊಂದಿರುವ ಔಷಧಿಗಳು ಏಕೆ ದುಬಾರಿ?
ಅಮೇರಿಕಾದಲ್ಲಿ ಪೇಟೆಂಟ್ ತಾಂತ್ರಿಕವಾಗಿ 20 ವರ್ಷಗಳವರೆಗೆ ಇರುತ್ತದೆ . ಆದಾಗ್ಯೂ, ಬಹುತೇಕ ಕಂಪನಿಗಳು ಔಷಧವು ಇನ್ನೂ ಪ್ರಯೋಗಗಳ ಹಂತದಲ್ಲಿದ್ದಾಗಲೇ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸುತ್ತವೆ, ಆದ್ದರಿಂದ, ಔಷಧವು ಮಾರುಕಟ್ಟೆಗೆ ಬಿಡುಗಡೆಗೊಳ್ಳುವ ಮೊದಲು ಎಷ್ಟು ಸಮಯದವರೆಗೆ ಪ್ರಯೋಗ ಹಂತದಲ್ಲಿತ್ತು ಎಂಬುದರ ಆಧಾರದ ಮೇಲೆ ಕಂಪನಿಯ ಪೇಟೆಂಟ್‌ನ ಪರಿಣಾಮಕಾರಿ ಅವಧಿಯು ಸಾಮಾನ್ಯವಾಗಿ 20 ವರ್ಷಗಳಿಗಿಂತ ಕಡಿಮೆ ಇರುತ್ತದೆ. ಹಾಗಾಗಿ, ಕಂಪನಿಯು ಹೂಡಿಕೆ ಮಾಡಿದ ಹಣವನ್ನು ಮರಳಿ ಪಡೆಯಲು ಮತ್ತು ಲಾಭ ಗಳಿಸಲು ಪ್ರಯತ್ನಿಸುವುದರಿಂದ ಹೊಸ ಔಷಧಿಗಳು ತುಂಬಾ ದುಬಾರಿಯಾಗಿರುತ್ತವೆ.
ಪೇಟೆಂಟ್ ಅವಧಿ ಮುಗಿದ ನಂತರ, ಯಾವುದೇ ಕಂಪನಿಯು ಆ ಔಷಧಿಯನ್ನು ತಯಾರಿಸಬಹುದು ಮತ್ತು ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ಇಂತಹ ಔಷಧಿಗಳನ್ನು ಜೆನೆರಿಕ್ ಔಷಧಗಳು ಎಂದು ಕರೆಯಲಾಗುತ್ತದೆ.
ಪೇಟೆಂಟ್ ಪಡೆದ ಔಷಧದ ಉದಾಹರಣೆ.
ಸ್ಪಿನ್ರಾಜಾ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುವ ನುಸಿನರ್ಸನ್ (ಜೆನೆರಿಕ್ ಹೆಸರು) ನರವೈಜ್ಞಾನಿಕ ಕಾಯಿಲೆಗೆ ಚಿಕಿತ್ಸೆ ನೀಡಲು ಬಳಸುವ ಒಂದು ಔಷಧವಾಗಿದೆ. ಈ ಔಷಧಿಯನ್ನು ಯುಕೆ ನಲ್ಲಿ ಪ್ರತಿ ಬಾಟಲಿಗೆ, £75,000 (70ಲಕ್ಷ) ದರದಲ್ಲಿಮಾರಾಟ ಮಾಡಲಾಗುತ್ತದೆ. (ಜೂನ್ 2018ರಂತೆ ಟ್ಯಾಕ್ಸ್ ಹೊರತುಪಡಿಸಿ). ಈ, ಒಟ್ಟು ವಾರ್ಷಿಕ ಚಿಕಿತ್ಸಾ ವೆಚ್ಚವು ಮೊದಲ ವರ್ಷಕ್ಕೆ £450,000 ಮತ್ತು ನಂತರದ ವರ್ಷಗಳಲ್ಲಿ £225,000 ಆಗಿದೆ. ಅಂದರೆ, 5 ವರ್ಷಗಳಲ್ಲಿ, ಚಿಕಿತ್ಸೆಯ ವೆಚ್ಚವು ಪ್ರತಿ ವ್ಯಕ್ತಿಗೆ 1.35 ಮಿಲಿಯನ್ (12 ಕೋಟಿ) ಆಗಿರುತ್ತದೆ.
ಜೆನೆರಿಕ್ ಔಷಧಿಯು ಏಕೆ ಅಗ್ಗ?
ಜೆನೆರಿಕ್ ಔಷಧಿಯನ್ನು ತಯಾರಿಸುವ ಕಂಪನಿಗಳು ತಮ್ಮ ಔಷಧಿಯನ್ನು ಗ್ರಾಹಕರಿಗೆ ತಲುಪಿಸುವ ಮುನ್ನ ಅದರ ಅಭಿವೃದ್ಧಿ ಅಥವಾ ಪ್ರಯೋಗದ ಮೇಲೆ ಹೂಡಿಕೆ ಮಾಡಿರುವುದಿಲ್ಲ. ಆದ್ದರಿಂದ, ಆ ಹೆಚ್ಚುವರಿ ವೆಚ್ಚ ತಪ್ಪಿರುತ್ತದೆ. ಒಂದೇ ಔಷಧಿಯನ್ನು ತಯಾರಿಸುವ ಒಂದಕ್ಕಿಂತ ಹೆಚ್ಚು ಜೆನೆರಿಕ್ ಔಷಧ ತಯಾರಕರಿದ್ದರೆ, ಸ್ಪರ್ಧೆಯ ಕಾರಣದಿಂದಾಗಿ ಔಷಧಿಯ ವೆಚ್ಚ ಮತ್ತಷ್ಟು ಕಡಿಮೆಯಾಗುತ್ತದೆ. ಮೂಲತಃವಾಗಿ ಮಾರುಕಟ್ಟೆಯ ಶಕ್ತಿಗಳು ವೆಚ್ಚವನ್ನು ನಿರ್ಧರಿಸುತ್ತವೆ.
ಪೇಟೆಂಟ್ ಮತ್ತು ಜೆನೆರಿಕ್ ಔಷಧದ ನಡುವೆ ವ್ಯತ್ಯಾಸವಿದೆಯೇ?
ಸೈದ್ಧಾಂತಿಕವಾಗಿ, ಎರಡೂ ಒಂದೇ ರೀತಿಯ ಪರಿಣಾಮ ಬೀರುತ್ತವೆ. ಆದರೆ, ಪೇಟೆಂಟ್ ಔಷಧಿಯನ್ನು ಅದರ ಪೇಟೆಂಟ್ ಹೊಂದಿರುವವರು ಅಥವಾ ಅದರ ಅಂಗಸಂಸ್ಥೆಗಳು ಮಾತ್ರ ತಯಾರಿಸುತ್ತಾರೆ ಹೊರತು ಎರಡೂ ಔಷಧಿಗಳು ಒಂದೇ ಪರಿಣಾಮಕಾರಿತ್ವವನ್ನು (ಪರಿಣಾಮ) ಹೊಂದಿರುತ್ತವೆ. ಆದಾಗ್ಯೂ, ಅವು ಆಕಾರ, ಬಣ್ಣ, ಪರಿಮಳ ಇತ್ಯಾದಿಗಳಲ್ಲಿ ಭಿನ್ನವಾಗಿರುತ್ತವೆ.
ಬ್ರ್ಯಾಂಡೆಡ್ ಜೆನೆರಿಕ್ಸ್ ಎಂದರೇನು?
ಇವು ಪೇಟೆಂಟ್ನ ನಿಯಾಮಗಳಿಗೆ ಒಳಪಟ್ಟಿರದ ಔಷಧಿಗಳಾಗಿದ್ದು, ಔಷಧೀಯ ಕಂಪನಿಗಳ ಬ್ರ್ಯಾಂಡ್ ಹೊಂದಿರುತ್ತವೆ. ಮತ್ತು ಅದೇ ಹೆಸರಿನಲ್ಲಿ ಮಾರಾಟವಾಗುತ್ತವೆ. ಸಾಮಾನ್ಯವಾಗಿ ಇವು ಬ್ರ್ಯಾಂಡ್ ಹೆಸರಿರದ ಜೆನರಿಕ್ ಔಷಧಿಗಳಿಂತ ಮೇಲ್ದರ್ಜೆಯವಾಗಿರುತ್ತವೆ. ಭಾರತದಲ್ಲಿ ಮಾರಾಟವಾಗುವ ಬಹುಪಾಲು ಔಷಧಿಗಳು ಇಂತಹವೇ.
ಜೆನೆರಿಕ್ ಔಷಧಿಗಳು ಏಕೆ ಜನಪ್ರಿಯವಾಗಿಲ್ಲ?
ಪೇಟೆಂಟ್ ಪಡೆದ ಔಷಧಿ ಅಥವಾ ಬ್ರಾಂಡ್ ಔಷಧಿಗಳಂತೆ ಅವುಗಳನ್ನು ಮಾರಾಟ/ ಪ್ರಚಾರ ಮಾಡಲಾಗುವುದಿಲ್ಲ. ಆದ್ದರಿಂದ, ಹೆಚ್ಚು ಜನರಿಗೆ ತಿಳಿದಿಲ್ಲ. ಜೆನೆರಿಕ್ ಔಷಧಿಗಳನ್ನು ತಯಾರಿಸಲು ನಿಯಮಗಳು ಸ್ಪಷ್ಟವಾಗಿದ್ದರೂ, ಅಂದರೆ, ಮೂಲದ ಔಷಧಿಯಂತೆ ಪರಿಣಾಮಕಾರಿತ್ವ ಮತ್ತು ಅಡ್ಡಪರಿಣಾಮದ ರೀತಿಯಲ್ಲೂ ಒಂದೇ ಆಗಿರಬೇಕು ಎಂಬ ನಿಯಮವಿದ್ದರೂ ಕಂಪನಿಗಳು ಅದನ್ನು ಪಾಲಿಸುತ್ತಿರುವಂತೆ ಕಾಣುವುದಿಲ್ಲ. ಅದೇ ರೀತಿ, ಈ ಔಷಧಿಗಳನ್ನು ತಯಾರಿಸುವ ಅನೇಕ ಕಂಪನಿಗಳು ಜನರಿಗೆ ಪರಿಚಯವಿಲ್ಲದ ಕಾರಣ ಅನುಮಾನದ ನೆರಳು ಇದ್ದೇ ಇದೆ.
ಒಂದೇ ಔಷಧವು ಬೇರೆ ಬೇರೆ ಹೆಸರುಗಳನ್ನು ಹೊಂದಿರುತ್ತದೆಯೇ?
ಹೌದು, ಪ್ರತಿ ಔಷಧಿಗೆ ಕನಿಷ್ಠ ಎರಡು ಹೆಸರುಗಳಿರುತ್ತವೆ ಒಂದು ಜೆನೆರಿಕ್ ಹೆಸರಾದರೆ ಮತ್ತು ಮತ್ತೊಂದು ಕಂಪನಿಯು ಮಾರಾಟ ಮಾಡುವ ಬ್ರಾಂಡ್ ಹೆಸರು.
ಉದಾಹರಣೆಗೆ,
ಎನ್-ಅಸಿಟೈಲ್-ಪ್ಯಾರಾ-ಅಮಿನೋಫೆನಾಲ್ ಅಥವಾ ಸಿ 8 ಹೆಚ್ 9 ಎನ್ಒ 2 ಸಾಮಾನ್ಯವಾಗಿ ಬಳಸುವ ಔಷಧವಾಗಿದೆ.
ಔಷಧಿಯ ಹೆಸರನ್ನು ನೆನಪಿಟ್ಟುಕೊಳ್ಳಲು ಅಥವಾ ನೆನಪಿಸಿಕೊಳ್ಳಲು ಸುಲಭವೇ?
ಸುಲಭವಾಗಿ,ನೆನಪಿಟ್ಟುಕೊಳ್ಳಲು ಅಥವಾ ನೆನಪಿಸಿಕೊಳ್ಳಲು ಸಾಧ್ಯವಾಗುವಂತೆ ಇದಕ್ಕೆ “PARACETAMOL” ಎಂಬ ಸಾಮಾನ್ಯ ಹೆಸರನ್ನು ನೀಡಲಾಗಿದೆ. ನಿಮಗೆ ಈ ಔಷಧದ ಪರಿಚಯವಿದ್ದೇ ಇರುತ್ತದೆ. ಈ ಔಷಧಿಯನ್ನು ಬ್ರಾಂಡ್ ಹೆಸರಿನಲ್ಲಿ (ಬ್ರಾಂಡ್ ಜೆನೆರಿಕ್) ಅಡಿಯಲ್ಲಿ ಮಾರಾಟ ಮಾಡಲಾಗುತ್ತದೆ: ಯುಎಸ್ಎದಲ್ಲಿ ಪನಾಡೋಲ್, ಯುಕೆ ಕ್ಯಾಲ್ಪೋಲ್, ಇಂಡಿಯಾದಲ್ಲಿ ಕ್ರೋಸಿನ್ ಎಂಬ ಹೆಸರುಗಳಿವೆ.
ಮೇಲಿನ ಔಷಧಿಯನ್ನು ನೀವು ಔಷಧದ ಪ್ಯಾಕೆಟ್ ಮತ್ತು ತಯಾರಕ ಅಥವಾ ಮಾರಾಟಗಾರರ ವಿವರಗಳಲ್ಲಿ ಗಮನಿಸಿ ಖರೀದಿಸಬಹುದು. ಅದು ಜೆನೆರಿಕ್ ಔಷಧವಾಗಿದೆ. ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳು ಅಂತಹ ಔಷಧಿಗಳನ್ನು ವಿತರಿಸುತ್ತವೆ.
ಸಾಮಾನ್ಯ ಮನುಷ್ಯ ಸಾಮಾನ್ಯ ಔಷಧಿ ಮತ್ತು ಬ್ರಾಂಡ್ ಔಷಧಿಯ ಹೆಸರನ್ನು ಹೇಗೆ ತಿಳಿದುಕೊಳ್ಳಬಹುದು?
ಪ್ರತಿಯೊಂದು ಔಷಧಿ ಪ್ಯಾಕೆಟ್ / ಶೀಟ್ / ಬಾಟಲಿಯು ಕೆಳಗಿನ ಉದಾಹರಣೆಗಳಲ್ಲಿ ತೋರಿಸಿರುವಂತೆ ಜೆನೆರಿಕ್ ಮತ್ತು ಬ್ರಾಂಡ್ ಹೆಸರುಗಳನ್ನು ಹೊಂದಿರಬೇಕು. ಇದೇ ರೀತಿಯ ಪರಿಕಲ್ಪನೆಯು ಎಲ್ಲಾ ಔಷಧಿಗಳಿಗೆ ಅನ್ವಯಿಸುತ್ತದೆ. (ಮಾತ್ರೆಗಳು, ಸಿರಪ್ ಇತ್ಯಾದಿ)
ಆದ್ದರಿಂದ, ಡೊಲೊ650 ಒಂದು “ಬ್ರಾಂಡೆಡ್ ಜೆನೆರಿಕ್ ಔಷಧವಾಗಿದೆ”, ಮತ್ತು ಈ ಕೆಳಗೆ ಜೆನೆರಿಕ್ ಔಷಧದ ಉದಾಹರಣೆಯೊಂದನ್ನು ನೀಡಲಾಗಿದೆ. ಪ್ಯಾರೆಸಿಟಮಾಲ್ ಬಹಳ ಹಳೆಯ ಔಷಧವಾಗಿದ್ದು, ಅದರ ಹಕ್ಕುಸ್ವಾಮ್ಯಗಳು ಬಹಳ ಹಿಂದೆಯೇ ಅವಧಿ ಮೀರಿವೆ ಮತ್ತು ಆದ್ದರಿಂದ ಯಾವುದೇ ಪೇಟೆಂಟ್ ಆವೃತ್ತಿಗಳಿಲ್ಲ.
ಸಂಪೂರ್ಣ ಮಾಹಿತಿಗಾಗಿ ಉತ್ಪಾದಕರ ಮಾಹಿತಿ ಕೈಪಿಡಿಯನ್ನು ನೋಡಿ.
ಉಲ್ಲೇಖಗಳು:
1. ಐಎಪಿ ಡ್ರಗ್ ಫಾರ್ಮುಲರಿ ವೆಬ್ ಅಪ್‌ಡೇಟ್ 2020 (3) ಆವೃತ್ತಿ 58, https://www.iapdrugformulary.com/Home
2. ಗ್ರಾಹಕ ಔಷಧಿಗಳ ಮಾಹಿತಿ (ಸಿಎಮ್ಐ), https://www.tga.gov.au/consumer-medicines-information-cmi
3. ಬ್ರಿಟಿಷ್ ಮಕ್ಕಳ ರಾಷ್ಟ್ರೀಯ ಫಾರ್ಮುಲರಿ (ಬಿಎನ್‌ಎಫ್‌ಸಿ)
4. ಅಮೆರಿಕಾನ್ ಆಹಾರ ಮತ್ತು ಔಷಧಿಗಳ ಆಡಳಿತ, ಯುಎಸ್ಎ; https://www.fda.gov