ಡಾ ಸಿ ಪಿ ರವಿ ಕುಮಾರ್
ಸಲಹೆಗಾರ – ಪೀಡಿಯಾಟ್ರಿಕ್ ನ್ಯೂರಾಲಜಿ
MRCPCH, ಪೀಡಿಯಾಟ್ರಿಕ್ಸ್‌ನಲ್ಲಿ CCT (U.K.)
ಪೀಡಿಯಾಟ್ರಿಕ್ ಎಪಿಲೆಪ್ಸಿಯಲ್ಲಿ ಫೆಲೋ & ನರವಿಜ್ಞಾನ (ಲಂಡನ್)
ಬ್ರ್ಯಾಂಡ್ ಹೆಸರು
ಮಾತ್ರೆ: ಬ್ರಿವಿಯಾಕ್ಟ್
ಬ್ರೈವರಸಿಟಮ್ ಎಂಬುದು ಮತ್ತೆ ಮತ್ತೆ ಕಾಣಿಸಿಕೊಳ್ಳುವ ಅಪಸ್ಮಾರ ಎಂದರೆ, ಎಪಿಲೆಪ್ಸಿ ನಿಯಂತ್ರಣದ ಚಿಕಿತ್ಸೆಗೆ ಬಳಸುವ ಔಷಧಿ. ಈ ಔಷಧಿಯು ಸಾಮಾನ್ಯವಾಗಿ ಫೋಕಲ್ (Focal) ಎಪಿಲೆಪ್ಸಿ ಎಂದರೆ ಮೆದುಳಿನ ಒಂದು ಬದಿಯಲ್ಲಿ ಪ್ರಾರಂಭವಾಗಿ ನಂತರ ಇಡೀ ಮೆದುಳಿಗೆ ಹರಡುವ ಎಪಿಲೆಪ್ಸಿಗೆ ಬಳಸುವ ಒಂದು ಬಗೆಯ ಔಷಧಿ.
ಬ್ರೈವರಸಿಟಮ್ ಔಷಧವು ಲಿವಿಟಿರಾಸಿಟಮ್ ಗುಂಪಿಗೆ ಸೇರಿದ ಔಷಧವಾಗಿದ್ದು, ಇವೆರಡು ಒಂದೇ ಬಗೆಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಆದರೆ, ಬ್ರೈವರಸಿಟಮ್ (ಇವೆರಡರಲ್ಲಿ ಹೊಸ ಔಷಧ) ನಲ್ಲಿ ಅಡ್ಡಪರಿಣಾಮಗಳ ಪ್ರಮಾಣ ಕಡಿಮೆ.
ನನ್ನ ಮಗು ಈ ಔಷಧ ತೆಗೆದುಕೊಳ್ಳುವುದು ಏಕೆ ಮುಖ್ಯ?
ನಿಮ್ಮ ಮಗುವಿಗೆ ಫಿಟ್ಸ್ ಬರುವುದನ್ನು ಕಡಿಮೆ ಮಾಡಲು ಅಥವಾ ಸಂಪೂರ್ಣವಾಗಿ ನಿಲ್ಲುವಂತೆ ಮಾಡಲು ನಿಯಮಿತವಾಗಿ ಅಥವಾ ಕ್ರಮಬದ್ಧವಾಗಿ ಬ್ರೈವರಸಿಟಮ್ ತೆಗೆದುಕೊಳ್ಳುವುದು ತುಂಬಾ ಮುಖ್ಯ.
ಬ್ರಿವರಸೆಟಮ್ ನೀಡುವುದನ್ನು ದಿಢೀರನೇ ನಿಲ್ಲಿಸಬೇಡಿ, ಇದರಿಂದ ನಿಮ್ಮ ಮಗು ಇನ್ನೂ ಹೆಚ್ಚಿನ ಫಿಟ್ಸ್‌ಗೆ ಒಳಗಾಗಬಹುದು.
ಮಾತ್ರೆಗಳ ರೂಪದಲ್ಲಿ ಲಭ್ಯವಿದೆ.
ದಿನಕ್ಕೆ ಎರಡು ಬಾರಿಯಂತೆ, 10-12 ಗಂಟೆಗಳ ಅಂತರದಲ್ಲಿ ಬೆಳಗ್ಗೆ ಮತ್ತು ಸಂಜೆ ಈ ಔಷಧಿಯನ್ನು ನೀಡಬೇಕು. ಉದಾಹರಣೆಗೆ, ಬೆಳಗ್ಗೆ 7 ರಿಂದ 8 ಗಂಟೆ ನಡುವೆ ಅಥವಾ ಸಂಜೆ 7 ರಿಂದ 8 ಗಂಟೆ ನಡುವಿನ ಸಮಯದಲ್ಲಿ ನೀಡಬಹುದು. ಒಂದು ವೇಳೆ ವೈದ್ಯರು ದಿನಕ್ಕೆ ಮೂರು ಬಾರಿ ನೀಡುವಂತೆ ಹೇಳಿದರೆ ಅವರ ಸಲಹೆಯನ್ನು ಪಾಲಿಸಿ. ಔಷಧಿಯನ್ನು ಪ್ರತಿದಿನ ನಿಗದಿತ ಸಮಯಕ್ಕೆ ನೀಡಿ. ಇದರಿಂದ ಅದು ದಿನನಿತ್ಯದ ರೂಢಿಯಾಗಿ, ಮರೆತು ಹೋಗುವ ಸಂದರ್ಭಗಳು ಇರುವುದಿಲ್ಲ.
ಒಂದು ವೇಳೆ ಔಷಧಿ ಕೊಡುವುದನ್ನು ಮರೆತರೆ?
ಆರು ಗಂಟೆಗಳ ಒಳಗಾಗಿ ನೆನಪಾದರೆ ನಿಮ್ಮ ಮಗುವಿಗೆ ತಪ್ಪಿಹೋದ ಡೋಸ್ ನೀಡಬಹುದು. ಆರು ಗಂಟೆಗಳ ಗಂಟೆಗಳ ನಂತರ ನೆನಪಾದರೆ ತಪ್ಪಿಹೋದ ಡೋಸ್ ನೀಡಬೇಡಿ. ಮುಂದಿನ ಡೋಸ್ ನೀಡುವ ಸಮಯದವರೆಗೆ ಕಾಯಿರಿ.
ಯಾವುದೇ ಕಾರಣಕ್ಕೂ ಎರಡು ಡೋಸ್ (ಪ್ರಮಾಣ) ಬ್ರೈವರಸಿಟಮ್ ಔಷಧಿ ನೀಡಬೇಡಿ.
ಮಗುವು ಔಷಧಿ ಸೇವಿಸಿದ 30 ನಿಮಿಷಗೊಳಗಾಗಿ ವಾಂತಿ ಮಾಡಿದರೆ ಮತ್ತೆ ಅಷ್ಟೇ ಪ್ರಮಾಣದ ಔಷಧಿ ನೀಡಿ; ಆದರೆ, ಔಷಧಿ ತೆಗೆದುಕೊಂಡ 30 ನಿಮಿಷಗಳ ನಂತರ ವಾಂತಿ ಮಾಡಿದರೆ, ಮತ್ತೆ ನೀಡಬೇಡಿ.
ನೀಡುವ ಔಷಧಿಯ ಪ್ರಮಾಣ ಎಷ್ಟಿರಬೇಕು?
ನಿಮ್ಮ ಮಗುವಿಗೆ ಎಷ್ಟು ಪ್ರಮಾಣದಲ್ಲಿ ಬ್ರೈವರಸಿಟಮ್ ನೀಡಬೇಕು ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ನೀಡಬೇಕಾದ ಔಷಧಿಯ ಪ್ರಮಾಣವನ್ನು ಸಾಮಾನ್ಯವಾಗಿ ಔಷಧಿ ಚೀಟಿಯಲ್ಲಿ ಬರೆದಿರಲಾಗುತ್ತದೆ.
ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಬ್ರೈವರಸಿಟಮ್ ನೀಡಿ. ಕೆಲವು ದಿನಗಳು ಅಥವಾ ವಾರಗಳ ನಂತರ ಔಷಧಿಯ ಪ್ರಮಾಣವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸುತ್ತಾ ಹೋಗಬೇಕಾಗುತ್ತದೆ. ಇದಕ್ಕೆ ನಿಮ್ಮ ವೈದ್ಯರ ಸಲಹೆಯನ್ನು ಪಾಲಿಸಿ. ಇದರಿಂದ ನಿಮ್ಮ ಮಗು ಔಷಧಿಗೆ ಹೊಂದಿಕೊಳ್ಳುತ್ತದೆ. ನಂತರ ಏನು ಮಾಡಬೇಕೆಂಬುದನ್ನು ನಿಮ್ಮ ವೈದ್ಯರು ವಿವರಿಸುತ್ತಾರೆ.
ಎಷ್ಟು ಔಷಧಿ ನೀಡಬೇಕೆಂದು ನಿಮ್ಮ ವೈದ್ಯರು ಸೂಚಿಸುತ್ತಾರೋ ನೀವು ಅದನ್ನು ಪಾಲಿಸುವುದು ತುಂಬಾ ಮುಖ್ಯ.
ನಿಮ್ಮ ಮಗು ಫಿಟ್ಸ್ ನಿಂದ ಮುಕ್ತವಾದರೆ ಅಥವಾ ಯಾವುದೇ ಅಡ್ಡಪರಿಣಾಮಗಳು ಇಲ್ಲವೆಂದರೆ ಔಷಧಿಯ ಪ್ರಮಾಣ ಸರಿಯಾಗಿದೆ ಎಂದರ್ಥ.
ಔಷಧಿಯನ್ನು ಹೇಗೆ ನೀಡಬೇಕು?
ಮಾತ್ರೆಗಳು: ಇವುಗಳನ್ನು ಒಂದು ಲೋಟ ನೀರು, ರಸ ಅಥವಾ ಹಾಲಿನೊಂದಿಗೆ ನುಂಗಬೇಕು. ಅಥವಾ ಪುಡಿಮಾಡಿ ನೀರು ಅಥವಾ ರಸ ಅಥವಾ ಸಣ್ಣ ಪ್ರಮಾಣದ ಮೊಸರಿನೊಂದಿಗೆ ಸೇವಿಸಬಹುದು.
ಯಾವುದೇ ಅಡ್ಡಪರಿಣಾಮಗಳಳ ಸಾಧ್ಯತೆಗಳಿವೆಯೇ? ‘ಅಡ್ಡಪರಿಣಾಮಗಳು’ ಹೈಪರ್ಲಿಂಕ್
ನಾವು ನಮ್ಮ ಮಕ್ಕಳ ಆರೋಗ್ಯ ಕಾಪಾಡಲು ಔಷಧಿಗಳನ್ನು ಉಪಯೋಗಿಸುತ್ತೇವೆ. ಆದರೆ, ಕೆಲವೊಂದು ಬಾರಿ ಅವು ನಮಗೆ ಬೇಡದ ಅಂದರೆ, ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತವೆ.
ನಿಮ್ಮನ್ನು ಚಿಂತೆಗೀಡುವ ಮಾಡುವ ಅಡ್ಡಪರಿಣಾಮಗಳು
ಬ್ರೈವರಸಿಟಮ್ ಸೇವನೆಯಿಂದಾಗಿ ಮಗುವಿನ ವರ್ತನೆಯಲ್ಲಿ ಬದಲಾವಣೆಯಾಗಬಹುದು ಅಥವಾ ಅದು ಖಿನ್ನತೆ ಅಥವಾ ಮನಸ್ಥಿತಿಯ ಬದಲಾವಣೆಗೆ ಕಾರಣವಾಗಬಹುದು. ಈಗಾಗಲೇ ಈ ಮೇಲಿನ ಸಮಸ್ಯೆ ಹೊಂದಿರುವವರಲ್ಲಿ ಈ ಅಪಾಯದ ಸಾಧ್ಯತೆ ಹೆಚ್ಚು. ಆದರೆ, ಮಕ್ಕಳಲ್ಲಿ ಈ ಅಪಾಯ ಕಡಿಮೆ.
• ಭ್ರಮೆಗಳು (ಅಸ್ತಿತ್ವದಲ್ಲಿಲ್ಲದ ವಿಷಯಗಳನ್ನು ನೋಡುವುದು ಅಥವಾ ಕೇಳುವುದು)
• ನಿಮ್ಮ ಮಗುವಿಗೆ ಮೂತ್ರಪಿಂಡದ ತೊಂದರೆ ಅಥವಾ ವೈಫಲ್ಯ ಇದ್ದರೆ; ದಯವಿಟ್ಟು ವೈದ್ಯರಿಗೆ ತಿಳಿಸಿ. ಏಕೆಂದರೆ, ಅಂತಹ ಸಂದರ್ಭಗಳಲ್ಲಿ ಈ ಔಷಧಿ ಮತ್ತು ಅದರ ಪ್ರಮಾಣದ ಬಳಕೆಯನ್ನು ಮರು ಪರಿಗಣಿಸಬೇಕಾಗುತ್ತದೆ.
• ಮೇಲಿನ ಯಾವುದೇ ಅಡ್ಡಪರಿಣಾಮಗಳು ಉಂಟಾದರೆ, ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ನೀವು ತಿಳಿದುಕೊಳ್ಳಬೇಕಾದ ಇತರ ಅಡ್ಡಪರಿಣಾಮಗಳು
ನಿಮ್ಮ ಮಗುವಿಗೆ ಅಸಹಜ ಎನಿಸುವಷ್ಟು ನಿದ್ರೆ ಹೆಚ್ಚಾಗಬಹುದು ಅಥವಾ ವರ್ತನೆಯಲ್ಲಿ ಬದಲಾವಣೆ ಕಾಣಬಹುದು
ಮಗುವಿಗೆ ವಾಕರಿಕೆ ಅಥವಾ ವಾಂತಿಯಾಗಬಹುದು. ಇದನ್ನು ತಪ್ಪಿಸಲು ಪ್ರಾರಂಭದಲ್ಲಿ ಔಷಧಿಯನ್ನು ಸ್ವಲ್ಪ ಪ್ರಮಾಣದಲ್ಲಿ ನೀಡಬೇಕು. ಕೆಲವು ದಿನ ಅಥವಾ ವಾರಗಳು ಕಳೆದಂತೆ ಕ್ರಮೇಣವಾಗಿ ಸ್ವಲ್ಪ ಸ್ವಲ್ಪವೇ ಔಷಧಿಯ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಗಬೇಕು.
ನಿಮ್ಮ ಮಗು ಮೊದಲು ಬ್ರೈವರಸಿಟಮ್ ತೆಗೆದುಕೊಳ್ಳಲು ಶುರು ಮಾಡಿದಾಗ ಪ್ರಾರಂಭದಲ್ಲಿ ಅಡ್ಡಪರಿಣಾಮಗಳು ಉಂಟಾಗಬಹುದು. ಏಕೆಂದರೆ, ಯಾವುದೇ ಔಷಧಿಯು ದೇಹಕ್ಕೆ ಹೊಂದಿಕೊಳ್ಳಲು ಕನಿಷ್ಟ ಒಂದು ವಾರ ಬೇಕಾಗಬಹುದು. ವೈದ್ಯರ ಸಲಹೆಯಂತೆ ನಿಮ್ಮ ಮಗುವಿಗೆ ಬ್ರೈವರಸಿಟಮ್ ನೀಡುವುದನ್ನು ಮುಂದುವರಿಸಿ.
ನಿಮ್ಮ ಮಗುವಿಗೆ ದದ್ದುಗಳು ಉಂಟಾದರೆ, ಔಷಧಿ ಕೊಡುವುದನ್ನು ನಿಲ್ಲಿಸಿ ಮತ್ತು ತಕ್ಷಣ ವೈದ್ಯರ ಸಲಹೆಯನ್ನು ಪಡೆಯಿರಿ
ಕೆಲವೊಮ್ಮೆ, ಈ ಮೇಲೆ ಪಟ್ಟಿ ಮಾಡಿದ ಅಡ್ಡಪರಿಣಾಮಗಳನ್ನು ಹೊರತುಪಡಿಸಿ ಇತರೆ ಅಡ್ಡಪರಿಣಾಮಗಳು ಸಹ ಉಂಟಾಗಬಹುದು. ಅಂತಹ ಅಸಾಮಾನ್ಯವಾದುದು ನಿಮ್ಮ ಗಮನಕ್ಕೆ ಬಂದರೆ ಮತ್ತು ಈ ಕುರಿತು ನಿಮಗೆ ಯಾವುದೇ ಅನುಮಾನಗಳಿದ್ದಲ್ಲಿ / ಆತಂಕವಿದ್ದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
• ನೀವು ಮಗುವಿಗೆ ಪ್ಯಾರಸಿಟಮಾಲ್ ಅಥವಾ ಐಬುಪ್ರೊಫೇನ್ ಔಷಧಿಗಳನ್ನು ನೀಡಬಹುದು. ಆದರೆ, ಪ್ರತಿಜೀವಕ ಅಂಶಗಳನ್ನೊಳಗೊಂಡ ಮತ್ತು ಮೆಡಿಕಲ್ ಸ್ಟೋರ್ ನಲ್ಲಿ ಕೊಂಡ ಇತರೆ ಔಷಧಿಗಳನ್ನು ಮಗುವಿಗೆ ನೀಡುವ ಮುನ್ನ ವೈದ್ಯರ ಸಲಹೆ ಪಡೆಯಿರಿ.
• ನಿಮ್ಮ ಮಗುವಿಗೆ ಬೇರೆ ಯಾವುದೇ ಔಷಧಿಗಳನ್ನು ನೀಡುವ ಮೊದಲು ನಿಮ್ಮ ವೈದ್ಯರ ಸಲಹೆ ಪಡೆಯಿರಿ. ಗಿಡಮೂಲಿಕೆ ಅಥವಾ ಪೂರಕ ಔಷಧಿಗಳಿಗೂ ಸಹ ಇದು ಅನ್ವಯವಾಗುತ್ತದೆ.
• ಅಪಸ್ಮಾರಕ್ಕೆ ಚಿಕಿತ್ಸೆ ನೀಡಲು ಬಳಸುವ ಇತರ ಕೆಲವು ಔಷಧಿಗಳು ಬ್ರೈವರಸಿಟಮ್ ನಷ್ಟೇ ಉತ್ತಮವಾಗಿ ಕೆಲಸ ಮಾಡಬಹುದು ಅಥವಾ ಅಡ್ಡಪರಿಣಾಮಗಳಿಗೂ ಕಾರಣವಾಗಬಹುದು. ಹಾಗಾಗಿ, ಇತರೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಲ್ಲಿ, ವೈದ್ಯರ ಗಮನಕ್ಕೆ ತನ್ನಿ.
ಈ ಔಷಧಿಯನ್ನು ಎಲ್ಲಿ ಇಡಬೇಕು?
ಔಷಧಿಯನ್ನು…
• ಶಾಖ ಮತ್ತು ನೇರ ಸೂರ್ಯನ ಬೆಳಕಿನಿಂದ ದೂರದಲ್ಲಿ ಯಾವುದಾದರೂ ಬೀರುವಿನಲ್ಲಿಡಿ. ಇದನ್ನು ಫ್ರಿಡ್ಜ್ ನಲ್ಲಿ ಇಡುವ ಅಗತ್ಯವಿಲ್ಲ.
• ಮಕ್ಕಳ ಕಣ್ಣಿನಿಂದ ಮತ್ತು ಅವರ ಕೈಗೆಟುಕದಂತೆ ದೂರವಿಡಿ
• ತಂದ ಕಂಟೈನರ್‌ನಲ್ಲೇ ಇಡಿ.
ಸಂಪೂರ್ಣ ಮಾಹಿತಿಗಾಗಿ ಉತ್ಪಾದಕರ ಮಾಹಿತಿ ಕೈಪಿಡಿಯನ್ನು ನೋಡಿ.
CONSULTANT – PEDIATRIC NEUROLOGY
Aster CMI Hospital, Bangalore