’ವಿಶೇಷ ಆರೈಕೆಯ ಅಗತ್ಯವಿರುವ ಮಕ್ಕಳು’ ಎಂದರೆ, ದೈಹಿಕ, ಬೌದ್ಧಿಕ (ಮಾನಸಿಕ, ಸಂವಹನ, ಬೆಳವಣಿಗೆ, ನರವೈಜ್ಞಾನಿಕ ಅಥವಾ ಕಲಿಕಾ ನ್ಯೂನತೆ) ಸಮಸ್ಯೆಯುಳ್ಳ ಹಾಗೂ ಈ ಕಾರಣದಿಂದಾಗಿ ಹೆಚ್ಚಿನ ಕಾಳಜಿಯ ಅವಶ್ಯಕತೆಯುಳ್ಳ ಮಕ್ಕಳು ಎಂದರ್ಥ. ಡೌನ್ ಸಿಂಡ್ರೋಮ್, ನರವೈಜ್ಞಾನಿಕ ಕಾಯಿಲೆಗಳು, ಮೆದುಳಿನ ನಿಸ್ಸಸ್ವತೆ, ದೃಷ್ಟಿ ಹಾಗೂ ಶ್ರವಣದೋಷ, ಆಟಿಸಂ ಸ್ಪೆಕ್ಟ್ರಮ್ ನ್ಯೂನತೆ, ಅತಿಚಟುವಟಿಕೆ ಮತ್ತು ಗಮನ ಕೊರತೆ, ಕಲಿಕಾ ನ್ಯೂನತೆ ಮತ್ತು ಇತರ ಬೆಳವಣಿಗೆ ನ್ಯೂನತೆಗಳನ್ನು ಹೊಂದಿರುವ ಮಕ್ಕಳಿಗೆ ಈ ರೀತಿಯ ವಿಶೇಷ ಗಮನ ಮತ್ತು ಆರೈಕೆಯ ಅಗತ್ಯವಿರುತ್ತದೆ.
ಈ ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಸ್ವತಃ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಸಹಜವಾಗಿಯೇ ಬಾಯಿಯ ಆರೋಗ್ಯವು ಸಹ ನಿರ್ಲಕ್ಷಿಸಲ್ಪಡುತ್ತದೆ. ಬಾಯಿಯನ್ನು ಸ್ವಚ್ಛವಾಗಿಡದಿದ್ದಲ್ಲಿ, ಅದಕ್ಕೆ ಸಂಬಂಧಿಸಿದಂತೆ ಹಲವು ಕಾಯಿಲೆಗಳು ಕೂಡ ಉಂಟಾಗುತ್ತದೆ. ಸಾಮಾನ್ಯವಾಗಿ, ಮಕ್ಕಳಲ್ಲಿ ಹಲ್ಲುಗಳು ಕ್ಷಯವಾಗುವ (ಉಳುಕು) ಸಾಧ್ಯತೆ ಹೆಚ್ಚಾಗಿಯೇ ಇರುತ್ತದೆ. ಈ ಮಕ್ಕಳಲ್ಲಿ ಅನೇಕರು ಇತರ ಆರೋಗ್ಯ ಸಮಸ್ಯೆಗಳನ್ನು ಸಹ ಹೊಂದಿರುತ್ತಾರೆ ಹಾಗೂ ಅವರಿಗೆ ನಿರಂತರವಾಗಿ ಔಷಧಿಗಳ ಅಗತ್ಯವಿರುತ್ತದೆ. ಕೆಲವು ದೀರ್ಘಕಾಲೀನ ಔಷಧಿಗಳ ಬಳಕೆಯು (ಉದಾಹರಣೆಗೆ – ಅಪಸ್ಮಾರ ಮತ್ತು ಅದಕ್ಕೆ ನೀಡಲಾಗುವ ಸೋಡಿಯಂ ವಾಲ್ಪ್ರೊಯೇಟ್) ಒಸಡಿನ ಊತ ಹಾಗೂ ಒಸಡುಗಳ ರಕ್ತಸ್ರಾವದಂತಹ ಅಡ್ಡ ಪರಿಣಾಮಗಳು ಸಂಭವಿಸಬಹುದು. ಇದಲ್ಲದೆ, ಬಾಯಿಯ ನೈರ್ಮಲ್ಯತೆಯನ್ನು ಕಾಪಾಡುವಲ್ಲಿನ ದೀರ್ಘಕಾಲದ ನಿರ್ಲಕ್ಷ್ಯತೆಯು ವಿಶೇಷ ಚೇತನ ಮಕ್ಕಳಲ್ಲಿ ಹಲ್ಲುಗಳ ಸುತ್ತಲಿನ ರಚನೆಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗಬಹುದು. ಮಾತ್ರವಲ್ಲದೆ, ಅನಾರೋಗ್ಯಕರ ಬಾಯಿಯ ನೈರ್ಮಲ್ಯದಿಂದಾಗಿ, ಸೆಲ್ಯುಲೈಟಿಸ್, ಸೋಂಕು, ರೋಗನಿರೋಧಕ ಶಕ್ತಿ ಕುಂದುವಿಕೆ, ಎಂಡೋಕಾರ್ಡಿಟಿಸ್ – ಈ ರೀತಿಯ ಇತರೆ ತೊಂದರೆ ಉಂಟಾಗುವ ಅಪಾಯ ಸಹ ಈ ಮಕ್ಕಳಲ್ಲಿ ಹೆಚ್ಚು. ಸಾಮಾನ್ಯವಾಗಿ ಇವರು ಚಿಕಿತ್ಸೆಗೆ ಸಹಕಾರ ನೀಡದಿರುವುದರಿಂದ ಹಾಗೂ ಅವರಲ್ಲಿನ ಆತಂಕದ ಕಾರಣಗಳಿಂದಾಗಿ ದಂತ ಚಿಕಿತ್ಸೆ ಸಾಧ್ಯವಾಗುವುದಿಲ್ಲ. ಆದ್ದರಿಂದ, ಹಲ್ಲಿನ ಸಮಸ್ಯೆಗಳನ್ನು ತಡೆಗಟ್ಟುವುದೇ ಹಲ್ಲಿನ ಚಿಕಿತ್ಸೆಯ ಅಗತ್ಯವನ್ನು ತಪ್ಪಿಸುವ ಉತ್ತಮ ಉಪಾಯ.
ಹಾಸಿಗೆ ಅಥವಾ ಸೋಫಾ: ಮಗುವು ತನ್ನ ತಲೆಯನ್ನು ನಿಮ್ಮ ತೊಡೆಯ ಮೇಲಿಟ್ಟು ಹಾಸಿಗೆ ಅಥವಾ ಸೋಫಾದ ಮೇಲೆ ಮಲಗಿರುವ ಸ್ಥಿತಿಯಲ್ಲಿದ್ದರೆ, ಹಲ್ಲುಜ್ಜುವಾಗ ಮಗುವಿನ ತಲೆ ಮತ್ತು ಭುಜಗಳನ್ನು ನಿಮ್ಮ ತೋಳಿನಿಂದ ಹಿಡಿದುಕೊಳ್ಳಿ. ಮಗುವಿಗೆ ಉಗುಳುವುದು ಕಷ್ಟವಾದರೆ, ಟೂತ್ಪೇಸ್ಟ್ ಅನ್ನು ಬಳಸಬೇಡಿ. (ಏಕೆಂದರೆ, ಈ ಭಂಗಿಯಲ್ಲಿ ಮಗುವು ಟೂತ್ ಪೇಸ್ಟ್ ಅನ್ನು ನುಂಗುವ ಸಾಧ್ಯತೆಯಿರುತ್ತದೆ.)
ಕುರ್ಚಿ: ಮಗುವು ನೆಲದ ಮೇಲೆ ಕುಳಿತಾಗ ನೀವು ಹಿಂದೆ ಕುರ್ಚಿಯೊಂದರಲ್ಲಿ ಕುಳಿತು ಮಗುವಿನ ತಲೆಯನ್ನು ನಿಮ್ಮ ತೊಡೆಯ ಮೇಲೆ ಇಟ್ಟುಕೊಂಡು ಹಿಂದಿನಿಂದ ಹಲ್ಲುಜ್ಜಬಹುದು. ಮಕ್ಕಳ ಬಾಯಿಯನ್ನು ಸ್ವಚ್ಛವಾಗಿಡಲು ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ, ಆರೋಗ್ಯಕರ ಆಹಾರವನ್ನು ನೀಡುವುದು ಸಹ ಬಹಳ ಮುಖ್ಯ. ಒಟ್ಟಾರೆ ಬೆಳವಣಿಗೆಗೆ ಮಾತ್ರವಲ್ಲದೆ, ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಠಿಕ ಆಹಾರ ಮತ್ತು ಸಕ್ಕರೆರಹಿತ ಆಹಾರ ನೀಡಬೇಕು. ಸಕ್ಕರೆ ಮತ್ತು ಪಿಷ್ಟದ ಅಂಶವನ್ನೊಳಗೊಂಡ ಆಹಾರವು ಮಗುವಿನ ಹಲ್ಲುಗಳ ನಡುವೆ ಸಿಲುಕಿಕೊಳ್ಳುವುದರಿಂದ ಅದರ ಸೇವನೆಯನ್ನು ಮಿತಿಗೊಳಿಸುವುದು ಅತ್ಯಗತ್ಯ. ಮುಖ್ಯವಾಗಿ, ಊಟದ ನಂತರ. ಮಗು ಏನನ್ನಾದರೂ ಸೇವಿಸಿದಾಗ, ಸಕ್ಕರೆಯಲ್ಲಿರುವ ಆಮ್ಲಗಳು ಉಂಟು ಮಾಡಬಹುದಾದ ಸಮಸ್ಯೆಯನ್ನು ತಡೆಯಲು ಬಾಯಿಯನ್ನು ಚೆನ್ನಾಗಿ ತೊಳೆಯಬೇಕು. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ತಮ್ಮ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪೋಷಕರ ಪಾತ್ರ ಬಹುಮುಖ್ಯ. ಶಿಶುವೈದ್ಯರು ಮತ್ತು ದಂತವೈದ್ಯರ ಸಹಾಯದಿಂದ ಮಗುವಿಗೆ ಹಲ್ಲಿನ ಸಮಸ್ಯೆ ಉಂಟಾಗುವುದನ್ನು ಸಂಪೂರ್ಣವಾಗಿ ತಪ್ಪಿಸಬಹುದು.
ವಿಶೇಷ ಅಗತ್ಯವುಳ್ಳ ಮಕ್ಕಳಲ್ಲಿ ಹಲ್ಲುಗಳ ನೈರ್ಮಲ್ಯತೆಯನ್ನು ಕಾಪಾಡುವುದು ಹೇಗೆ?
ಯಾವುದೇ ವ್ಯಕ್ತಿಯ ಒಟ್ಟಾರೆ ಆರೋಗ್ಯದಲ್ಲಿ ಬಾಯಿಯ ಆರೋಗ್ಯವು ಸಹ ಒಂದು ಭಾಗ. ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ವಿಶೇಷ ಅಗತ್ಯವುಳ್ಳ ಮಕ್ಕಳಲ್ಲಿ ಅತ್ಯಂತ ಪ್ರಮುಖವಾದುದು. ಸಾಮಾನ್ಯವಾಗಿ, ಈ ಮಕ್ಕಳ ಪೋಷಕರು ತುರ್ತು ವೈದ್ಯಕೀಯ ಸಮಸ್ಯೆಗಳೆಡೆ ಗಮನ ಹರಿಸುತ್ತಾರೇ ಹೊರತು, ಬಾಯಿಯ ಆರೋಗ್ಯದೆಡೆ ಕಾಳಜಿ ವಹಿಸುವುದಿಲ್ಲ. ಮಗುವಿನ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು, ಮಗುವಿನ ದೈಹಿಕ ಮತ್ತು ಬಾಯಿಯ ಆರೋಗ್ಯದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಬಹಳ ಮುಖ್ಯ.- ಮಗುವಿನ ಬಾಯಿ ಹಾಗೂ ಹಲ್ಲುಗಳನ್ನು ಸ್ವಚ್ಛವಾಗಿಡುವ ಅಭ್ಯಾಸವನ್ನು ಬಹಳ ಚಿಕ್ಕ ವಯಸ್ಸಿನಿಂದಲೇ ಪ್ರಾರಂಭಿಸುವುದು ಉತ್ತಮ. ಪ್ರತಿ ಬಾರಿ ಆಹಾರ ಸೇವನೆಯ ನಂತರ ಮಗುವಿನ ಒಸಡುಗಳನ್ನು ಸ್ವಚ್ಚವಾದ ಬಟ್ಟೆಯಿಂದ ಅಥವಾ ತೇವವಾದ ನವಿರುಬಟ್ಟೆಯಿಂದ ಸ್ವಚ್ಚಗೊಳಿಸಬೇಕು. ಮಗುವಿನ ಹಲ್ಲುಗಳು ಮೂಡಿದ ನಂತರ, ಫಿಂಗರ್ ಬ್ರೆಷ್ ಅಥವಾ ಸ್ವಚ್ಛವಾದ ಹಾಗೂ ನವಿರಾದ ಬಟ್ಟೆಯ ತುಂಡುಗಳಿಂದ ಹಲ್ಲುಜ್ಜಲು ಪ್ರಾರಂಭಿಸಿ.
- ಮಗುವಿನ ಹಲ್ಲುಗಳು ಮೂಡಿದ ನಂತರ ರಾತ್ರಿಯ ವೇಳೆ ಆಹಾರ ನೀಡದಿರುವುದು ಒಳ್ಳೆಯದು. ಏಕೆಂದರೆ, ಅದು ಹಲ್ಲಿನ ಹುಳಕಿಗೆ ಕಾರಣವಾಗಬಹುದು.
- ಫ್ಲೋರೈಡೇಟೆಡ್ (fluoridated) ಟೂತ್‌ಪೇಸ್ಟ್ ಬಳಸಿ ಸಣ್ಣ, ಮೃದುವಾದ ಹಲ್ಲುಜ್ಜುವ ಬ್ರಷ್‌ನಿಂದ ಮಗುವಿನ ಹಲ್ಲುಗಳನ್ನು ಉಜ್ಜಲು ಪ್ರಾರಂಭಿಸಬೇಕು.
- ಮಗುವಿಗೆ ಒಂದು ವರ್ಷ ತುಂಬುವುದರ ಒಳಗಾಗಿ ದಂತ ವೈದ್ಯರನ್ನು ಭೇಟಿ ಮಾಡಬೇಕು. ಈ ವೇಳೆ ಅವರು ಮಗುವಿನ ಹಲ್ಲಿನ ಬೆಳವಣಿಗೆಯ ತಪಾಸಣೆ ನಡೆಸುತ್ತಾರೆ. ನಂತರ, ಮಗುವಿನ ಹಲ್ಲಿನ ಆರೈಕೆಯನ್ನು ಹೇಗೆ ಮಾಡಬೇಕೆಂಬುದರ ಕುರಿತು ಸಲಹೆ-ಸೂಚನೆಗಳನ್ನು ನೀಡುತ್ತಾರೆ.
- ಮಗುವಿಗೆ ಸ್ವತಃ ಹಲ್ಲುಜ್ಜಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ, ಪೋಷಕರು ಅಥವಾ ಮಗುವಿನ ಪಾಲಕರು ಪ್ರತಿದಿನ ಎರಡು ಬಾರಿ ಹಲ್ಲುಜ್ಜಲು ಮಗುವಿಗೆ ಸಹಾಯ ಮಾಡುವ ಮೂಲಕ ಅಭ್ಯಾಸ ಬೆಳೆಸಬೇಕು. ಮಗುವಿಗೆ ಚಿಕ್ಕ ವಯಸ್ಸಿನಿಂದಲೇ ಹಲ್ಲಿನ ನೈರ್ಮಲ್ಯದ ಮಹತ್ವವನ್ನು ತಿಳಿಸುವುದು ಬಹು ಮುಖ್ಯ.
- ಸಾಮಾನ್ಯವಾಗಿ, ವಿಶೇಷ ಚೇತನ ಮಕ್ಕಳು, ಹಲ್ಲುಜ್ಜುವ ಬ್ರಷ್‌ಗಳನ್ನು ಹಿಡಿದುಕೊಳ್ಳಲು ಸಾಕಷ್ಟು ಚಲನಾ/ ಸ್ನಾಯು ಕೌಶಲಗಳನ್ನು ಹೊಂದಿರುವುದಿಲ್ಲ. ಹಾಗಾಗಿ, ಈ ಮಕ್ಕಳಿಗೆಂದೇ ವಿನ್ಯಾಸಗೊಳಿಸಿ, ತಯಾರಿಸಲಾದ, ಭದ್ರವಾಗಿ ಹಿಡಿಯಲು ಸಾಧ್ಯವಾಗುವಂತಹ/ ಉತ್ತಮ ಹಿಡಿಕೆಯುಳ್ಳ ಹಲವಾರು ಟೂತ್ ಬ್ರಷ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇದರ ಆಕಾರವು ಹಿಡಿಕೆಯನ್ನು ಸಮರ್ಪಕವಾಗಿ ಬಳಸಲು ಸಾಧ್ಯವಾಗುವಂತೆ ಇದೆ.
- ತಮ್ಮ ಕೈಗಳನ್ನು ಬಳಸಿ ಸ್ವತಃ ಹಲ್ಲುಜ್ಜಲು ಸಾಮರ್ಥ್ಯವಿಲ್ಲದ ಮಕ್ಕಳಿಗೆ ವಿದ್ಯುತ್ ಚಾಲಿತ ಟೂತ್ ಬ್ರಷ್/ ಎಲೆಕ್ಟ್ರಿಕ್ ಟೂತ್ ಬ್ರಷ್‌ಗಳನ್ನು ನೀಡಬಹುದು. ಈ ಟೂತ್ ಬ್ರಷ್‌ಗಳನ್ನು ವಿಶೇಷ ಚೇತನ ಮಕ್ಕಳಿಗೆಂದೇ ವಿನ್ಯಾಸಗೊಳಿಸಲಾಗಿದ್ದು, ತುಂಬಾ ಉಪಯುಕ್ತವೆಂದು ಸಾಬೀತಾಗಿದೆ.
- ಮಗುವು ಬ್ರಷ್ ನ ತುದಿಯನ್ನು ಹಿಡಿದು ತಾನೇ ಸ್ವತಂತ್ರವಾಗಿ ಬಳಸುವಷ್ಟು ಸಮರ್ಥವಾದಾಗ, ಎಲೆಕ್ಟ್ರಿಕ್ ಟೂತ್ ಬ್ರಷ್ ನೀಡಬಹುದು. ಆದರೆ, ಪೋಷಕರು ಮಗುವಿನ ಹಲ್ಲುಗಳನ್ನು ಹಲ್ಲುಜ್ಜುತ್ತಿದ್ದರೆ, ಮಗುವಿನ ವಯಸ್ಸಿಗೆ ತಕ್ಕಂತೆ ವಿದ್ಯುತ್ ಚಾಲಿತ ಹಲ್ಲುಜ್ಜುವ ಬ್ರಷ್ಗಳನ್ನು ಬಳಸಬಹುದು.
- ಎಲೆಕ್ಟ್ರಿಕ್ ಟೂತ್ ಬ್ರಷ್ಗಳು ಸರಿಯಾಗಿ ಮತ್ತು ಸಂಪೂರ್ಣವಾಗಿ ಹಲ್ಲುಜ್ಜಲು ಸಹಾಯ ಮಾಡುತ್ತವೆ ಹಾಗೂ ಇವುಗಳಿಂದ ಶೀಘ್ರವಾಗಿ ಹಲ್ಲುಜ್ಜಲು ಸಾಧ್ಯವಿದೆ.
- ಕೆಲವು ಮಕ್ಕಳಿಗೆ ಟೂತ್ಪೇಸ್ಟ್ ಅನ್ನು ಉಗುಳಲು ಸಾಧ್ಯವಾಗದಿರಬಹುದು. ಅಥವಾ ಟೂತ್ ಪೇಸ್ಟ್ ನ ನೊರೆಯಿಂದ ಮಗುವಿಗೆ ಬಾಯಿ ತೆರೆಯಲು/ ಉಸಿರಾಡಲು ಕಷ್ಟವಾಗಬಹುದು. ಪೋಷಕರು ಮಗುವಿನ ಹಲ್ಲುಜ್ಜುವ ಸಮಯದಲ್ಲಿ ಟೂತ್ ಪೇಸ್ಟ್ ಬಳಕೆಯಿಂದ ಅತಿಯಾದ ನೊರೆ ಉಂಟಾಗಬಹುದು. ಅಂತಹ ಸಂದರ್ಭಗಳಲ್ಲಿ, ಟೂತ್ ಬ್ರಷ್ ಅನ್ನು ಕೇವಲ ನೀರು ಅಥವಾ ಸುವಾಸನೆಯ ಮೌತ್ ವಾಶ್ನಿಂದ ತೇವಗೊಳಿಸಿ ಬಳಸಬಹುದು.
- ಹಲ್ಲುಜ್ಜಲು ಮಗುವು ಅವಕಾಶ ಮಾಡಿಕೊಡದಿದ್ದರೆ, ಮೆಡಿಕಲ್ ಸ್ಟೋರ್ ಗಳಲ್ಲಿ ಲಭ್ಯವಿರುವ ಲಿಸ್ಟರಿನ್ನಂತಹ (Listerine) ಅನೇಕ ಮೌತ್ವಾಶ್ಗಳನ್ನು ನೀರಿನಲ್ಲಿ ಬೆರಸಿ ಬಳಸಬಹುದು. ಆದರೆ ಮಗುವು ಅದನ್ನು ನುಂಗದೆ ಉಗುಳುವಂತೆ ನೋಡಿಕೊಳ್ಳಬೇಕು.
- ಆಂಟಿಮೈಕ್ರೊಬಿಯಲ್ ಮೌತ್ವಾಶ್ಗಳು ವಿಶೇಷವಾಗಿ ಕ್ಲೋರ್ಹೆಕ್ಸಿಡಿನ್ ನ ಬಳಕೆಯು ಹಲ್ಲುಗಳಲ್ಲಿ ಜಿಗುಟಾದ ಅಂಶ (ಬ್ಯಾಕ್ಟೀರಿಯಾವುಳ್ಳ) ಶೇಖರವಾಗುವುದನ್ನು ತಡೆಯಲು ಮತ್ತು ಒಸಡು ಕಾಯಿಲೆಗಳ ತೀವ್ರತೆಯನ್ನು ಕಡಿಮೆ ಮಾಡಲು ಪರಿಣಾಮಕಾರಿ. ಮೌತ್ ವಾಶ್ ನ ಸರಿಯಾದ ಪ್ರಮಾಣವನ್ನು ದಂತವೈದ್ಯರು ಅಥವಾ ಮಕ್ಕಳ ವೈದ್ಯರ ಬಳಿ ಕೇಳಿ ತಿಳಿದುಕೊಳ್ಳಬಹುದು.
- ಪೋಷಕರು ದಂತವೈದ್ಯರು ಸೂಚಿಸುವ ಫ್ಲೋರೈಡ್ ಜೆಲ್ಗಳನ್ನು ಬಳಸುವ ಮೂಲಕ ಹಲ್ಲಿನ ಕ್ಷಯದಿಂದ ರಕ್ಷಣೆ ಒದಗಿಸಬಹುದು.
- ಹಲ್ಲಿನ ರಕ್ಷಣೆಗೆ ಸಹಕರಿಸದ, ಬಯಸದ ಅಥವಾ ದೈಹಿಕವಾಗಿ ಸಹಕರಿಸಲು ಸಾಧ್ಯವಾಗದ ಮಕ್ಕಳ ವಿಷಯದಲ್ಲಿ, ಪೋಷಕರು ವಿಶೇಷ ಕಾಳಜಿ ವಹಿಸಬೇಕು.
ಹಾಸಿಗೆ ಅಥವಾ ಸೋಫಾ: ಮಗುವು ತನ್ನ ತಲೆಯನ್ನು ನಿಮ್ಮ ತೊಡೆಯ ಮೇಲಿಟ್ಟು ಹಾಸಿಗೆ ಅಥವಾ ಸೋಫಾದ ಮೇಲೆ ಮಲಗಿರುವ ಸ್ಥಿತಿಯಲ್ಲಿದ್ದರೆ, ಹಲ್ಲುಜ್ಜುವಾಗ ಮಗುವಿನ ತಲೆ ಮತ್ತು ಭುಜಗಳನ್ನು ನಿಮ್ಮ ತೋಳಿನಿಂದ ಹಿಡಿದುಕೊಳ್ಳಿ. ಮಗುವಿಗೆ ಉಗುಳುವುದು ಕಷ್ಟವಾದರೆ, ಟೂತ್ಪೇಸ್ಟ್ ಅನ್ನು ಬಳಸಬೇಡಿ. (ಏಕೆಂದರೆ, ಈ ಭಂಗಿಯಲ್ಲಿ ಮಗುವು ಟೂತ್ ಪೇಸ್ಟ್ ಅನ್ನು ನುಂಗುವ ಸಾಧ್ಯತೆಯಿರುತ್ತದೆ.)
ಕುರ್ಚಿ: ಮಗುವು ನೆಲದ ಮೇಲೆ ಕುಳಿತಾಗ ನೀವು ಹಿಂದೆ ಕುರ್ಚಿಯೊಂದರಲ್ಲಿ ಕುಳಿತು ಮಗುವಿನ ತಲೆಯನ್ನು ನಿಮ್ಮ ತೊಡೆಯ ಮೇಲೆ ಇಟ್ಟುಕೊಂಡು ಹಿಂದಿನಿಂದ ಹಲ್ಲುಜ್ಜಬಹುದು. ಮಕ್ಕಳ ಬಾಯಿಯನ್ನು ಸ್ವಚ್ಛವಾಗಿಡಲು ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ, ಆರೋಗ್ಯಕರ ಆಹಾರವನ್ನು ನೀಡುವುದು ಸಹ ಬಹಳ ಮುಖ್ಯ. ಒಟ್ಟಾರೆ ಬೆಳವಣಿಗೆಗೆ ಮಾತ್ರವಲ್ಲದೆ, ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಠಿಕ ಆಹಾರ ಮತ್ತು ಸಕ್ಕರೆರಹಿತ ಆಹಾರ ನೀಡಬೇಕು. ಸಕ್ಕರೆ ಮತ್ತು ಪಿಷ್ಟದ ಅಂಶವನ್ನೊಳಗೊಂಡ ಆಹಾರವು ಮಗುವಿನ ಹಲ್ಲುಗಳ ನಡುವೆ ಸಿಲುಕಿಕೊಳ್ಳುವುದರಿಂದ ಅದರ ಸೇವನೆಯನ್ನು ಮಿತಿಗೊಳಿಸುವುದು ಅತ್ಯಗತ್ಯ. ಮುಖ್ಯವಾಗಿ, ಊಟದ ನಂತರ. ಮಗು ಏನನ್ನಾದರೂ ಸೇವಿಸಿದಾಗ, ಸಕ್ಕರೆಯಲ್ಲಿರುವ ಆಮ್ಲಗಳು ಉಂಟು ಮಾಡಬಹುದಾದ ಸಮಸ್ಯೆಯನ್ನು ತಡೆಯಲು ಬಾಯಿಯನ್ನು ಚೆನ್ನಾಗಿ ತೊಳೆಯಬೇಕು. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ತಮ್ಮ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪೋಷಕರ ಪಾತ್ರ ಬಹುಮುಖ್ಯ. ಶಿಶುವೈದ್ಯರು ಮತ್ತು ದಂತವೈದ್ಯರ ಸಹಾಯದಿಂದ ಮಗುವಿಗೆ ಹಲ್ಲಿನ ಸಮಸ್ಯೆ ಉಂಟಾಗುವುದನ್ನು ಸಂಪೂರ್ಣವಾಗಿ ತಪ್ಪಿಸಬಹುದು.
Dr C P Ravikumar
CONSULTANT – PEDIATRIC NEUROLOGY
Aster CMI Hospital, Bangalore