Dr C P Ravikumar

ಸೋಡಿಯಂ ವಾಲ್‌ಪ್ರೊಯೇಟ್

ಪೋಷಕರ ಅಥವಾ ರೋಗಿಯ ಮಾಹಿತಿ ಕೈಪಿಡಿ

ಡಾ ಸಿ ಪಿ ರವಿ ಕುಮಾರ್

ಸಲಹೆಗಾರ – ಪೀಡಿಯಾಟ್ರಿಕ್ ನ್ಯೂರಾಲಜಿ

MRCPCH, ಪೀಡಿಯಾಟ್ರಿಕ್ಸ್‌ನಲ್ಲಿ CCT (U.K.)

ಪೀಡಿಯಾಟ್ರಿಕ್ ಎಪಿಲೆಪ್ಸಿಯಲ್ಲಿ ಫೆಲೋ & ನರವಿಜ್ಞಾನ (ಲಂಡನ್)

ಬ್ರ್ಯಾಂಡ್ ಹೆಸರುಗಳು: ವ್ಯಾಲ್ಪರಿನ್, ಎಪಿವಲ್

ಸಿರಪ್: ವಾಲ್ಪರಿನ್, ಎನಕ್ರೋಟ್

ನಿಧಾನವಾಗಿ ಬಿಡುಗಡೆಯಾಗುವ ಮಾತ್ರೆ/ಔಷಧಿ: ಎನ್‌ಕೊರೇಟ್ ಕ್ರೋನೋ, ವಾಲ್ಪರಿನ್ ಕ್ರೋನೋ

“ಜೆನೆರಿಕ್ Vs ಬ್ರ್ಯಾಂಡೆಡ್ ಔಷಧಿಗಳು”

ವಾಲ್‌ಪ್ರೊಯೇಟ್ ಎಂಬುದು ಅಪಸ್ಮಾರದ ಚಿಕಿತ್ಸೆಯಲ್ಲಿ ವಿವಿಧ ಬಗೆಯ ಸೆಳೆವುಗಳನ್ನು (ಫಿಟ್ಸ್) ನಿಯಂತ್ರಿಸಲು ಬಳಸಲಾಗುವ ಒಂದು ಬಗೆಯ ಔಷಧ. ಇದನ್ನು ಅನುಪಸ್ಥಿತಿ ಸೆಳೆವು, ಟಾನಿಕ್- ಕ್ಲೊನಿಕ್ ಸೆಳೆವು, ಮ್ಯೊಕ್ಲೊನಿಕ್ ಸೆಳೆವು (ಫಿಟ್ಸ್), ಅಟೋನಿಕ್ ಸೆಳೆವು, ಮತ್ತು ಅರೆ ಸೆಳೆವಿನ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

ನನ್ನ ಮಗು ಈ ಔಷಧಿ ತೆಗೆದುಕೊಳ್ಳುವುದು ಏಕೆ ಮುಖ್ಯ?

ಫಿಟ್ಸ್ ಬರುವುದನ್ನು ಕಡಿಮೆ ಮಾಡಲು ಅಥವಾ ಸಂಪೂರ್ಣವಾಗಿ ತಡೆಯಲು ನಿಮ್ಮ ಮಗುವು ನಿಯಮಿತವಾಗಿ ಸೋಡಿಯಂ ವಾಲ್‌ಪ್ರೊಯೇಟ್ ಔಷಧಿ ತೆಗೆದುಕೊಳ್ಳುವುದು ತುಂಬಾ ಮುಖ್ಯ.

ನಿಮ್ಮ ಮಗುವಿಗೆ ಸೋಡಿಯಂ ವಾಲ್‌ಪ್ರೊಯೇಟ್ ನೀಡುವುದನ್ನುದಿಢೀರನೆ ನಿಲ್ಲಿಸಬೇಡಿ. ಇದರಿಂದ ಮಗುವಿನ ಫಿಟ್ಸ್ ಹೆಚ್ಚಾಗಬಹುದು.

ಸೋಡಿಯಂ ವಾಲ್‌ಪ್ರೊಯೇಟ್ ಯಾವ ರೂಪದಲ್ಲಿ ಲಭ್ಯವಿದೆ?

ದ್ರವ, ಮಾತ್ರೆ ಹಾಗೂ ಮಾರ್ಪಡಿಸಿದ ಮಾತ್ರೆಗಳ ರೂಪದಲ್ಲಿ (ಮಾತ್ರೆ ನುಂಗಿದ ಬಳಿಕ ಔಷಧಿಯು ನಿಧಾನವಾಗಿ ರಕ್ತದೊಳಗೆ ಬಿಡುಗಡೆಯಾಗುತ್ತದೆ)

ಸೋಡಿಯಂ ವಾಲ್‌ಪ್ರೊಯೇಟನ್ನು ಯಾವಾಗ ನೀಡಬೇಕು?

ದಿನಕ್ಕೆ ಎರಡು ಬಾರಿ. ಬೆಳಗ್ಗೆ ಮತ್ತು ಸಂಜೆ ನೀಡಬಹುದು. ಆದರೆ, ಕನಿಷ್ಟ 10-12 ಗಂಟೆಗಳ ಅಂತರವಿರಲಿ.

ಉದಾಹರಣೆಗೆ, ಬೆಳಗ್ಗೆ 7 ರಿಂದ 8 ಗಂಟೆಯ ನಡುವೆ ಅಥವಾ ಸಂಜೆ 7 ರಿಂದ 8 ಗಂಟೆ ನಡುವಿನ ಸಮಯದಲ್ಲಿ ನೀಡಬಹುದು. ಕೆಲವೊಮ್ಮೆ ವೈದ್ಯರು ದಿನಕ್ಕೆ ಮೂರು ಬಾರಿ ಔಷಧಿ ನೀಡುವಂತೆ ಸೂಚಿಸಬಹುದು. ಅಂತಹ ಸಂದರ್ಭದಲ್ಲಿ ದಯವಿಟ್ಟು ನಿಮ್ಮ ವೈದ್ಯರ ಸಲಹೆಯನ್ನ ಅನುಸರಿಸಿ.

ಪ್ರತಿದಿನ ನಿಗದಿತ ಸಮಯಕ್ಕೆ ಔಷಧಿ ನೀಡಬೇಕು. ಇದರಿಂದ ಔಷಧಿ ಕೊಡುವುದು ರೂಢಿಯಾಗಿ ಮರೆತು ಹೋಗುವ ಸಂಭವಗಳು ಕಡಿಮೆಯಾಗುತ್ತವೆ.

ಔಷಧಿ ಕೊಡುವುದನ್ನುಮರೆತರೆ ಏನು ಮಾಡಬೇಕು?

ಒಂದು ವೇಳೆ ನಿಮಗೆ ಆರು ಗಂಟೆಗಳ ಒಳಗಾಗಿ ನೆನಪಾದರೆ ನಿಮ್ಮ ಮಗುವಿಗೆ ತಪ್ಪಿ ಹೋದ ಡೋಸ್ ನೀಡಿ. ಆರು ಗಂಟೆಗಳ ನಂತರ ನೆನಪಾದರೆ ತಪ್ಪಿಹೋದ ಡೋಸ್ ನೀಡಬೇಡಿ. ನಿಯಮಿತವಾಗಿ ನಿಗದಿತ ಡೋಸ್ ನೀಡುವ ಸಮಯದವರೆಗೂ ಕಾಯಿರಿ.

ಮಾರ್ಪಾಡಿತ ಔಷಧಿ: ಒಂದು ವೇಳೆ ನೀವು ಡೋಸ್ ನೀಡುವುದು ಮರೆತರೆ ಅದನ್ನು ಮುಂದಿನ ಎಂಟು ಗಂಟೆಗಳ ಒಳಗಾಗಿ ಯಾವಾಗ ಬೇಕಾದರೂ ನೀಡಬಹುದು. ಈ ಸಮಯ ಮೀರಿದ್ದರೆ, ನಿಯಮಿತವಾಗಿ ನಿಗದಿತ ಡೋಸ್ ನೀಡುವ ಸಮಯದವರೆಗೂ ಕಾಯಿರಿ.

ಯಾವುದೇ ಕಾರಣಕ್ಕೂ ಎರಡು ಡೋಸ್ ಸೋಡಿಯಂ ವಾಲ್‌ಪ್ರೊಯೇಟ್ ನೀಡಬೇಡಿ.

ಔಷಧಿಯ ಒಂದು ಡೋಸ್ ತೆಗೆದುಕೊಂಡ 30 ನಿಮಿಷಗಳ ಒಳಗೆ ನಿಮ್ಮ ಮಗು ವಾಂತಿ ಮಾಡಿಕೊಂಡರೆ ಮತ್ತೆ ಇನ್ನೊಂದು ಡೋಸ್ ನೀಡಿ; ಒಂದು ವೇಳೆ ಮಗುವು ಔಷಧಿಯನ್ನು ತೆಗೆದುಕೊಂಡ 30 ನಿಮಿಷಗಳ ನಂತರ ವಾಂತಿ ಮಾಡಿಕೊಂಡರೆ ಮತ್ತೊಮ್ಮೆ ಅದನ್ನು ನೀಡುವುದು ಬೇಡ.

ಔಷಧಿಯ ಪ್ರಮಾಣ ಎಷ್ಟಿರಬೇಕು?

ನಿಮ್ಮ ಮಗುವಿಗೆ ಎಷ್ಟು ಪ್ರಮಾಣದಲ್ಲಿ ಸೋಡಿಯಂ ವಾಲ್‌ಪ್ರೊಯೇಟ್ ನೀಡಬೇಕು ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ನೀಡಬೇಕಾದ ಔಷಧಿಯ ಪ್ರಮಾಣವನ್ನು ಸಾಮಾನ್ಯವಾಗಿ ಔಷಧಿ ಚೀಟಿಯಲ್ಲಿ ಬರೆದಿರಲಾಗುತ್ತದೆ.

ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಸೋಡಿಯಂ ವಾಲ್‌ಪ್ರೊಯೇಟ್ ನೀಡಿ. ಕೆಲವು ದಿನಗಳು ಅಥವಾ ವಾರಗಳ ನಂತರ ಔಷಧಿಯ ಪ್ರಮಾಣವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸುತ್ತಾ ಹೋಗಬೇಕಾಗುತ್ತದೆ. ಇದಕ್ಕೆ ನಿಮ್ಮ ವೈದ್ಯರ ಸಲಹೆಯನ್ನು ಪಾಲಿಸಿ. ಇದರಿಂದ ನಿಮ್ಮ ಮಗು ಔಷಧಿಗೆ ಹೊಂದಿಕೊಳ್ಳುತ್ತದೆ. ನಂತರ ಏನು ಮಾಡಬೇಕೆಂಬುದನ್ನುನಿಮ್ಮ ವೈದ್ಯರು ವಿವರಿಸುತ್ತಾರೆ.

ಎಷ್ಟು ಔಷಧಿ ಕೊಡಬೇಕೆಂದು ನಿಮ್ಮ ವೈದ್ಯರು ಸೂಚಿಸುತ್ತಾರೋ ಅದನ್ನು ಪಾಲಿಸುವುದು ಮುಖ್ಯ

ನಿಮ್ಮ ಮಗು ಫಿಟ್ಸ್ ನಿಂದ ಮುಕ್ತವಾದರೆ ಅಥವಾ ಯಾವುದೇ ಅಡ್ಡಪರಿಣಾಮಗಳು ಇಲ್ಲವೆಂದರೆ ಔಷಧಿಯ ಪ್ರಮಾಣ ಸರಿಯಾಗಿದೆ ಎಂದರ್ಥ.

ಔಷಧಿಯನ್ನು ಹೇಗೆ ನೀಡಬೇಕು? ? “ಔಷಧಿಗಳನ್ನು ನೀಡುವುದು”

ಮಾತ್ರೆಗಳು: ಇದನ್ನು ಒಂದು ಲೋಟ ನೀರು, ಜ್ಯೂಸ್ ಅಥವಾ ಹಾಲಿನೊಂದಿಗೆ ನುಂಗಬೇಕು. ಅಥವಾ ಇವುಗಳನ್ನು ಪುಡಿಮಾಡಿ ನೀರು ಅಥವಾ ರಸ ಅಥವಾ ಸಣ್ಣ ಪ್ರಮಾಣದ ಮೊಸರಿನೊಂದಿಗೆ ಸೇವಿಸಬಹುದು.

ದ್ರವ ಅಥವಾ ಸಿರಪ್: ಓರಲ್ ಸಿರಿಂಜ್ ಅಥವಾ ಔಷಧಿ ಚಮಚದಿಂದ ಸರಿಯಾದ ಪ್ರಮಾಣದ ಔಷಧಿಯನ್ನು ಅಳತೆ ಮಾಡಿಕೊಳ್ಳಿ. ಇದನ್ನು ಔಷಧಿ ಅಂಗಡಿಗಳಲ್ಲಿ ಖರೀದಿಸಬಹುದು. ಅಡುಗೆಮನೆಯಲ್ಲಿ ಬಳಸುವ ಟೀ ಚಮಚವನ್ನುಬಳಸಬೇಡಿ. ಇದರಿಂದ ಸರಿಯಾದ ಅಳತೆ ಸಿಗುವುದಿಲ್ಲ.

ಇದರಿಂದ ಏನಾದರೂ ಅಡ್ಡಪರಿಣಾಮಗಳಾಗುವ ಸಾಧ್ಯತೆ ಇದೆಯೇ? “ಅಡ್ಡ ಪರಿಣಾಮಗಳು”

ನಮ್ಮ ಮಕ್ಕಳ ಆರೋಗ್ಯ ಉತ್ತಮಪಡಿಸಲು ನಾವು ಔಷಧಿಗಳನ್ನು ಬಳಸುತ್ತೇವೆ. ಆದರೆ, ಕೆಲವೊಮ್ಮೆ ಅವು ಅನಗತ್ಯ ಪರಿಣಾಮಗಳನ್ನು (ಅಡ್ಡಪರಿಣಾಮಗಳು) ಉಂಟು ಮಾಡಬಹುದು.

ನಿಮ್ಮ ಚಿಂತೆಗೆ ಕಾರಣವಾಗಬಹುದಾದ ಅಡ್ಡಪರಿಣಾಮಗಳು

ಪ್ಯಾನ್‌ಕ್ರಿಯಾಟೈಟಿಸ್: ನಿಮ್ಮ ಮಗುವಿಗೆ ತೀವ್ರ ಹೊಟ್ಟೆನೋವು ಬಂದರೆ ಅಥವಾ ಪದೇ ಪದೇ ಅನಾರೋಗ್ಯ ಉಂಟಾದರೆ (ವಾಂತಿಯಾಗುವುದು) ಅಥವಾ ಎರಡೂ ಸಮಸ್ಯೆಗಳು ಕಂಡು ಬಂದರೆ ತಕ್ಷಣ ಮಗುವನ್ನುಆಸ್ಪತ್ರೆಗೆ ಅಥವಾ ವೈದ್ಯರ ಬಳಿ ಕರೆದುಕೊಂಡು ಹೋಗಿ.

ಲಿವರ್ (ಯಕೃತ್ತು) ಕಾಯಿಲೆ: ನಿಮ್ಮ ಮಗುವಿಗೆ ಅನಾರೋಗ್ಯ ಉಂಟಾದರೆ, ಹೊಟ್ಟೆನೋವು, ತೀವ್ರ ನಿದ್ರೆ, ಜಾಂಡೀಸ್ (ಕಾಮಾಲೆ) ಬಂದರೆ (ಚರ್ಮ ಹಾಗು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ) ಅಥವಾ ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಫಿಟ್ಸ್ ಬಂದರೆ ತಕ್ಷಣ ಮಗುವನ್ನು ಆಸ್ಪತ್ರೆಗೆ ಅಥವಾ ವೈದ್ಯರ ಬಳಿ ಕರೆದುಕೊಂಡು ಹೋಗಿ.

ಹೆಚ್ಚಿನ ಡೋಸ್ ನೀಡಿದಾಗ ಅಪರೂಪವಾಗಿ ಲಘುವಾದ ಕಂಪನ ಅಥವಾ ಕೈಯಲ್ಲಿ ನಡುಕ ಉಂಟಾಗಬಹುದು ಹಾಗೂ ಡೋಸ್ ಕಡಿಮೆ ಮಾಡಿದಂತೆ ಅದು ಮಾಯವಾಗುತ್ತದೆ.

ಕೆಲವೊಮ್ಮೆ ಸೋಡಿಯಂ ವಾಲ್‌ಪ್ರೊಯೇಟ್, ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ರಕ್ತಕಣಗಳು ಕ್ಷೀಣಿಸಲು ಕಾರಣವಾಗಬಹುದು. ಇದರಿಂದ ಅಪರೂಪದಲ್ಲಿ ಕೆಲವೊಮ್ಮೆ ತೊಂದರೆ ಉಂಟಾಗಬಹುದು. ನಿಮ್ಮ ಮಗುವಿಗೆ ರಕ್ತಸ್ರಾವ ಅಥವಾ ಮೈಮೇಲೆ ಗುಳ್ಳೆಗಳು ಉಂಟಾದರೆ ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು. ಅವರು ರಕ್ತ ಪರೀಕ್ಷೆಗೆ ವ್ಯವಸ್ಥೆ ಮಾಡುತ್ತಾರೆ.

ನೀವು ತಿಳಿದುಕೊಳ್ಳಬೇಕಾದ ಇತರೆ ಅಡ್ಡಪರಿಣಾಮಗಳು

• ನಿಮ್ಮ ಮಗು ಸೋಡಿಯಂ ವಾಲ್‌ಪ್ರೊಯೇಟ್ ತೆಗೆದುಕೊಳ್ಳಲು ಪ್ರಾರಂಭಿಸಿದಾಗ ಈ ಕೆಳಗಿನ ಅಡ್ಡಪರಿಣಾಮಗಳು ಉಂಟಾಗಬಹುದು. ಆದರೆ, ಸಾಮಾನ್ಯವಾಗಿ ಒಂದು ವಾರದೊಳಗೆ ಅಥವಾ ಅವರ ದೇಹವು ಔಷಧಿಗೆ ಹೊಂದಿಕೊಂಡಂತೆ ಸರಿ ಹೋಗುತ್ತದೆ. ನಿಮ್ಮ ವೈದ್ಯರು ಹೇಳಿದಂತೆ ನಿಮ್ಮ ಮಗುವಿಗೆ ಸೋಡಿಯಂ ವಾಲ್‌ಪ್ರೊಯೇಟ್ ನೀಡುವುದನ್ನು ಮುಂದುವರೆಸಿ. ನಿಮ್ಮ ಮಗುವಿಗೆ ಸಾಮಾನ್ಯಕ್ಕಿಂತ ಹೆಚ್ಚಿಗೆ ನಿದ್ದೆ ಬರಬಹುದು ಅಥವಾ ವರ್ತನೆಯಲ್ಲಿ ಬದಲಾವಣೆ ಉಂಟಾಗಬಹುದು.

• ಮಗುವಿಗೆ ಸಾಮಾನ್ಯಕ್ಕಿಂತ ಹೆಚ್ಚಿಗೆ ಹಸಿವಾಗಬಹುದು – ಇದು ಹಲವಾರು ತಿಂಗಳುಗಳವರೆಗೆ ಇರುತ್ತದೆ. ಕಡಿಮೆ ಕೊಬ್ಬಿನ ಅಂಶ ಮತ್ತು ಕಡಿಮೆ ಸಕ್ಕರೆ ಪ್ರಮಾಣವುಳ್ಳ ಆಹಾರವನ್ನು ಸೇವಿಸುವಂತೆ ನಿಮ್ಮ ಮಗುವನ್ನು ಪ್ರೋತ್ಸಾಹಿಸಿ. ಇಲ್ಲವಾದರೆ ಅವರ ದೇಹದ ತೂಕವು ಹೆಚ್ಚಾಗಬಹುದು.

• ನಿಮ್ಮ ಮಗುವಿಗೆ ಹಸಿವು ಕಡಿಮೆಯಾಗಬಹುದು ಅಥವಾ ವಾಕರಿಕೆ ಹಾಗೂ ವಾಂತಿಯಾಗಬಹುದು. ಮಗುವಿಗೆ ಆಹಾರದ ಜೊತೆಯಲ್ಲಿ ಸಣ್ಣ ಪ್ರಮಾಣದಲ್ಲಿ ಔಷಧಿಯನ್ನು ನೀಡಿ. ಕ್ರಮೇಣವಾಗಿ ಪ್ರಮಾಣವನ್ನು ಹೆಚ್ಚಿಸುತ್ತಾ ಹೋದಲ್ಲಿ ಈ ಸಮಸ್ಯೆಯನ್ನು ತಡೆಗಟ್ಟಬಹುದು.

• ನಿಮ್ಮ ಮಗುವಿಗೆ ಕೂದಲು ಉದುರುವಿಕೆ ಸಮಸ್ಯೆ ಉಂಟಾಗಬಹುದು. ಅದು ಮತ್ತೆ ಬೆಳೆಯುತ್ತದೆ. ಆದರೆ, ಮಗುವಿನ ಕೂದಲು ಹಿಂದಿಗಿಂತ ಗುಂಗುರು ಹಾಗೂ ಗಾಢ ಬಣ್ಣದಲ್ಲಿ ಇರುತ್ತದೆ.

ನಿಮ್ಮ ಮಗುವಿಗೆ ದೇಹದಲ್ಲಿ ದದ್ದುಗಳು ಉಂಟಾದರೆ, ಔಷಧಿ ನೀಡುವುದನ್ನು ನಿಲ್ಲಿಸಿ ಮತ್ತು ತಕ್ಷಣ ವೈದ್ಯರಿಂದ ಸಲಹೆ ಪಡೆಯಿರಿ.

ಕೆಲವೊಮ್ಮೆ, ಈ ಮೇಲೆ ಪಟ್ಟಿ ಮಾಡಿದ ಅಡ್ಡಪರಿಣಾಮಗಳನ್ನು ಹೊರತುಪಡಿಸಿ ಇತರೆ ಅಡ್ಡಪರಿಣಾಮಗಳು ಸಹ ಉಂಟಾಗಬಹುದು. ಅಂತಹ ಅಸಾಮಾನ್ಯವಾದುದು ನಿಮ್ಮ ಗಮನಕ್ಕೆ ಬಂದರೆ ಮತ್ತು ಈ ಕುರಿತು ನಿಮಗೆ ಯಾವುದೇ ಅನುಮಾನಗಳಿದ್ದಲ್ಲಿ,/ ಆತಂಕವಿದ್ದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ನಿಮ್ಮ ಮಗು ಸೋಡಿಯಂ ವ್ಯಾಲ್ಪ್ರೋಯೇಟ್ ತೆಗೆದುಕೊಳ್ಳಲು ಶುರು ಮಾಡಿದ ಆರಂಭದಲ್ಲಿ ಈ ಅಡ್ಡಪರಿಣಾಮಗಳು ಉಂಟಾಗಬಹುದು. ಆದರೆ,ನಿಮ್ಮ ಮಗುವಿನ ದೇಹ ಔಷಧಿಗೆ ಹೊಂದಿಕೊಂಡಂತೆ ಒಂದು ವಾರದೊಳಗೆ ಸಹಜ ಸ್ಥಿತಿಗೆ ಬರುತ್ತದೆ. ವೈದ್ಯರು ನಿಮಗೆ ಹೇಳಿರುವಂತೆ ಮಗುವಿಗೆ ವಾಲ್‌ಪ್ರೊಯೇಟ್ ನೀಡುವುದನ್ನು ಮುಂದುವರೆಸಿ.

ಈ ಎಲ್ಲಾ ಅಡ್ಡಪರಿಣಾಮಗಳ ಹೊರತಾಗಿಯೂ ವಾಲ್‌ಪ್ರೊಯೇಟ್ ಅಪಸ್ಮಾರಕ್ಕೆ ಪರಿಣಾಮಕಾರಿಯಾದ ಔಷಧಿ. ಹಾಗೂ ಮಗುವಿನ ಎಚ್ಚರ, ವರ್ತನೆ ಮತ್ತು ಸಾಮರ್ಥ್ಯಗಳ ಮೇಲೆ ತುಂಬಾ ಕಡಿಮೆ ಪರಿಣಾಮ ಹೊಂದಿದೆ.

ಸೋಡಿಯಂ ವಾಲ್‌ಪ್ರೊಯೇಟ್ ನೀಡುವ ಸಮಯದಲ್ಲಿ ಇತರೆ ಸಾಮಾನ್ಯ ಔಷಧಿಗಳನ್ನು ನೀಡಬಹುದೇ?

• ನೀವು ಮಗುವಿಗೆ ಪ್ಯಾರಸಿಟಮಾಲ್ ಅಥವಾ ಐಬುಪ್ರೊಫೇನ್ ಔಷಧಿಗಳನ್ನು ನೀಡಬಹುದು. ಆದರೆ, ಪ್ರತಿಜೀವಕ ಅಂಶಗಳನ್ನೊಳಗೊಂಡ ಔಷಧಿ ಮತ್ತು ಮೆಡಿಕಲ್ ಸ್ಟೋರ್ ನಲ್ಲಿ ಕೊಂಡ ಇತರೆ ಔಷಧಿಗಳನ್ನು ಮಗುವಿಗೆ ನೀಡುವ ಮುನ್ನ ವೈದ್ಯರ ಸಲಹೆ ಪಡೆಯಿರಿ.

• ನಿಮ್ಮ ಮಗುವಿಗೆ ಬೇರೆ ಔಷಧಿಗಳನ್ನು ನೀಡುವ ಮೊದಲು ನಿಮ್ಮ ವೈದ್ಯರನ್ನೊಮ್ಮೆ ಸಂಪರ್ಕಿಸಿ. ಅದು ಗಿಡಮೂಲಿಕೆ ಅಥವಾ ಪೂರಕ ಔಷಧಿಗಳಾಗಿದ್ದರೂ ಸಹ, ವೈದ್ಯರ ಸಲಹೆ ಇಲ್ಲದೆ ಮುಂದುವರೆಯಬೇಡಿ.

• ಅಪಸ್ಮಾರಕ್ಕೆ ಚಿಕಿತ್ಸೆ ನೀಡಲು ಬಳಸುವ ಇತರ ಕೆಲವು ಔಷಧಿಗಳು ಸೋಡಿಯಂ ವಾಲ್‌ಪ್ರೊಯೇಟ್ ನಷ್ಟೇ ಉತ್ತಮವಾಗಿ ಕೆಲಸ ಮಾಡಬಹುದು ಅಥವಾ ಅಡ್ಡಪರಿಣಾಮಗಳಿಗೂ ಕಾರಣವಾಗಬಹುದು. ಹಾಗಾಗಿ, ಇತರೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ವೈದ್ಯರ ಗಮನಕ್ಕೆ ತನ್ನಿ. ಅಡ್ಡಪರಿಣಾಮಗಳ ಬಗ್ಗೆ ನಿಮಗೆ ಆತಂಕವಿದ್ದಲ್ಲಿ ಅಥವಾ ನಿಮ್ಮ ಮಗುವಿಗೆ ಹೆಚ್ಚು ಬಾರಿ ಫಿಟ್ಸ್ ಬರುತ್ತಿದ್ದಲ್ಲಿ, ವೈದ್ಯರನ್ನು ಸಂಪರ್ಕಿಸಿ.

ಸೋಡಿಯಂ ವಾಲ್‌ಪ್ರೊಯೇಟ್ ಮತ್ತು ಗರ್ಭಧಾರಣೆ

• ಭ್ರೂಣದ ಮೇಲೆ ಸೋಡಿಯಂ ವ್ಯಾಲ್ಪ್ರೋಯೇಟ್ ಪರಿಣಾಮ ಬೀರಬಹುದು.

• ಸೋಡಿಯಂ ವ್ಯಾಲ್ಪ್ರೋಯೇಟ್ ತೆಗೆದುಕೊಳ್ಳುತ್ತಿರುವ ಹುಡುಗಿಯರು ಅಥವಾ ಮಹಿಳೆಯರು ಗರ್ಭನಿರೋಧಕ ಮಾತ್ರೆಗಳನ್ನು ಬಳಸಬಹುದು. ಆದರೆ, ಸಾಕಷ್ಟು ಎಚ್ಚರಿಕೆಯಿಂದಿರಬೇಕಾಗುತ್ತದೆ.

ಔಷಧಿಯನ್ನ ಎಲ್ಲಿ ಸಂರಕ್ಷಿಸಿ ಇಡಬೇಕು?

ಔಷಧಿಯನ್ನು…

• ಸೂರ್ಯನ ಕಿರಣ ಮತ್ತು ಉಷ್ಣತೆಯಿಂದ ದೂರವಿರುವಂತೆ ಕಬೋರ್ಡ್ ನಲ್ಲಿ ಇಡಿ. ಇದನ್ನುಫ್ರಿಡ್ಜ್ ನಲ್ಲಿ ಇಡುವ ಅವಶ್ಯಕತೆ ಇಲ್ಲ.

• ಮಕ್ಕಳ ಕಣ್ಣಿಗೆ ಕಾಣಿಸದಂತೆ ಅಥವಾ ಅವರ ಕೈಗೆಟುಕದಂತೆ ನೋಡಿಕೊಳ್ಳಿ.

• ಖರೀದಿಸಿ ತಂದ ಬಾಕ್ಸ್ ನಲ್ಲಿಯೇ ಇಡಿ.

ಸಂಪೂರ್ಣ ಮಾಹಿತಿಗಾಗಿ ಉತ್ಪಾದಕರ ಮಾಹಿತಿ ಕೈಪಿಡಿಯನ್ನು ನೋಡಿ.

ಉಲ್ಲೇಖಗಳು:

  1. ಐಎಪಿ ಡ್ರಗ್ ಫಾರ್ಮುಲರಿ ವೆಬ್ ಅಪ್‌ಡೇಟ್ 2020 (3) ಆವೃತ್ತಿ 58, https://www.iapdrugformulary.com/Home
  2. ಗ್ರಾಹಕ ಔಷಧಿಗಳ ಮಾಹಿತಿ (ಸಿಎಮ್ಐ), https://www.tga.gov.au/consumer-medicines-information-cmi
  3. ಬ್ರಿಟಿಷ್ ಮಕ್ಕಳ ರಾಷ್ಟ್ರೀಯ ಫಾರ್ಮುಲರಿ (ಬಿಎನ್‌ಎಫ್‌ಸಿ)
  4. ಅಮೆರಿಕಾನ್ ಆಹಾರ ಮತ್ತು ಔಷಧಿಗಳ ಆಡಳಿತ, ಯುಎಸ್ಎ; https://www.fda.gov
Picture of Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore